
ಕಾಸರಗೋಡು : ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾಗಿ ಕನ್ನಡಿಗತಿ ಸವಿತಾ ಪುಂಡೂರು ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ.ಇಲ್ಲಿಯವರೆಗೆ ಅವರು ಈ ಹುದ್ದೆಯಲ್ಲಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿದ್ದು, ನವೆಂಬರ್ 13 ರಂದು ಅಧಿಕೃತವಾಗಿ ತಮ್ಮ ಕರ್ತವ್ಯವನ್ನು ಸ್ವೀಕರಿಸಲಿದ್ದಾರೆ.

1997ರಲ್ಲಿ ಅಧ್ಯಾಪಕಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಉಪ್ಪಳ, ಕುಂಬಳೆ, ಮೊಗ್ರಾಲ್ ಪುತ್ತೂರು ಹಾಗೂ ಇಡುಕ್ಕಿ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಸಹಾಯಕ ಶಿಕ್ಷಣಾಧಿಕಾರಿಯಾಗಿ ಬಡ್ತಿ ಪಡೆದಿದ್ದರು.

ಮಧೂರು ನಿವಾಸಿಯಾಗಿರುವ ಇವರು, ನೀಚಾರ್ಲು ಮಾ. ಸಂ. ಕಾಲೇಜು ಹೈಸ್ಕೂಲಿನ ನಿವೃತ್ತ ಗಣಿತ ಅಧ್ಯಾಪಕ ಕೃಷ್ಣರಾಜ ಪುಣೇಚಿತ್ತಾಯ ಹಾಗೂ ಬಿಐಎಂ ಹೈಸ್ಕೂಲಿನ ನಿವೃತ್ತ ಅಧ್ಯಾಪಕಿ ರತ್ನಾವತಿ ಟೀಚರ್ ಅವರ ಪುತ್ರಿ. ಅಲ್ಲದೆ, ಕೇರಳದ ನಿವೃತ್ತ ನ್ಯಾಯಾಧೀಶ ವಿಠಲ ರಾಜ್‌ಕುಮಾರ್ ಅವರ ಪತ್ನಿಯಾಗಿದ್ದಾರೆ.

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಸವಿತಾ ಪುಂಡೂರು ಅವರು, ತಾನು ಈಗಾಗಲೇ ನಿರ್ವಹಿಸುತ್ತಿದ್ದ ಹುದ್ದೆಗೆ ಈಗ ಖಾಯಂ ನೇಮಕಾತಿ ದೊರೆತಿರುವುದು ಸಂತಸ ತಂದಿದೆ ಎಂದಿದ್ದು, ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆ ಹಾಗೂ ಸಂತೋಷದಿಂದ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

