ಎಡನೀರು ಮಠಕ್ಕೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಭೇಟಿ; ಶ್ರೀಗಳಿಂದ ಗೌರವ ಸ್ವೀಕಾರ

ಕಾಸರಗೋಡು: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಎಡನೀರು ಮಠಕ್ಕೆ ಭೇಟಿ ನೀಡಿದರು. ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಮುಖ್ಯಮಂತ್ರಿಯನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಎಡನೀರು ಮಠವು ಜಾತ್ಯತೀತತೆ, ನೈತಿಕತೆ, ಸಹೋದರತೆ ಮತ್ತು ಕರುಣೆಯ ಪ್ರತೀಕವಾಗಿರುವ ಪವಿತ್ರ ಕೇಂದ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ಮಠದ ಬಗ್ಗೆ ತಿಳಿದುಕೊಂಡಿದ್ದಾಗಿ ಹೇಳಿದ ಅವರು, ಕೇಶವಾನಂದ ಭಾರತಿ ಸ್ವಾಮೀಜಿ ಪ್ರಕರಣದ ಐತಿಹಾಸಿಕ ತೀರ್ಪು ಭಾರತದ ಕಾನೂನು ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಸ್ಮರಿಸಿದರು. ಈ ಹಿಂದೆ ಶಾಸಕರಾಗಿ ಹಾಗೂ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲೂ ಮಠಕ್ಕೆ ಭೇಟಿ ನೀಡಿದ್ದಾಗಿ ತಿಳಿಸಿದರು.

ಮಠದ ವತಿಯಿಂದ ಅಶೋಕ ಸ್ತಂಭದ ಲಾಂಛನ ಹೊಂದಿರುವ ಸ್ಮರಣಿಕೆಯನ್ನು ಸ್ವಾಮೀಜಿ ಮುಖ್ಯಮಂತ್ರಿಗೆ ನೀಡಿ ಗೌರವಿಸಿದರು. ಬಳಿಕ ದೇವಸ್ಥಾನದಲ್ಲಿ ದರ್ಶನ ಪಡೆದ ಮುಖ್ಯಮಂತ್ರಿ ಪ್ರಸಾದ ಸ್ವೀಕರಿಸಿ, ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದರು. ಮತ್ತೊಮ್ಮೆ ಮಠಕ್ಕೆ ಭೇಟಿ ನೀಡುವುದಾಗಿ ತಿಳಿಸಿ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಕಲ್ಲಟ್ರ ಮಾಯಿನ್ ಹಾಜಿ, ಎ.ಕೆ.ಎಂ. ಅಶ್ರಫ್, ಕೆ. ನೀಲಕಂಠನ್, ಮಾಜಿ ಸಚಿವ ಸಿ.ಟಿ. ಅಹಮ್ಮದಲಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇಬಿನಮರದ ಹಾಗೂ ಕಾರ್ಯದರ್ಶಿ ಪ್ರಕಾಶ್ ಅವರು ಮುಖ್ಯಮಂತ್ರಿಯನ್ನು ಭೇಟಿಯಾದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!