ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರ, ಬಾಯಾರಿನಲ್ಲಿ ಶ್ರೀ ಸತ್ಯಸಾಯಿ ಬಾಬಾ ಅವರ 101ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಕನ್ನಡ ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ವಿದ್ಯಾರ್ಥಿಗಳ ಸೃಜನಶೀಲ ಬರವಣಿಗೆಯ ಕೈಬರಹದ ಹಸ್ತಪತ್ರಿಕೆಗಳಾದ ‘ಬೆಳಕು’ ಮತ್ತು ‘ಅಕ್ಷರಧಾರೆ’ ಲೋಕಾರ್ಪಣೆಗೊಂಡವು.


ಕನ್ನಡ ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಘದ ‘ಬೆಳಕು’ ಹಸ್ತಪತ್ರಿಕೆಯನ್ನು ವೇದಮೂರ್ತಿ ಪರಕಜೆ ಶ್ರೀ ಅನಂತ ನಾರಾಯಣ ಭಟ್ ಅವರು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ಏಳನೇ ತರಗತಿಯ ವಿದ್ಯಾರ್ಥಿಗಳ ಸೃಜನಶೀಲ ಬರವಣಿಗೆಯ ಅಭಿವ್ಯಕ್ತಿಯಾದ ‘ಅಕ್ಷರಧಾರೆ – ಇದು ಬರಹಗಳ ಹರಿವು’ ಎಂಬ ಹಸ್ತಪತ್ರಿಕೆಯನ್ನು ಪ್ರಶಾಂತಿ ಸೇವಾ ಟ್ರಸ್ಟ್ನ ಉಪಾಧ್ಯಕ್ಷರಾದ ಪೆಳತಡ್ಕ ಶ್ರೀ ರಾಮಕೃಷ್ಣ ಭಟ್ ಅವರು ಬಿಡುಗಡೆಗೊಳಿಸಿದರು. ಅಲ್ಲದೆ, ಕನ್ನಡ ಸಂಘದ ಬಿತ್ತಿಪತ್ರಿಕೆಯನ್ನೂ ಗಣ್ಯರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ವೇದಮೂರ್ತಿ ಪರಕಜೆ ಶ್ರೀ ಅನಂತ ನಾರಾಯಣ ಭಟ್ ಅವರು, “ಅಕ್ಷರಗಳು ಕೇವಲ ಬರಹಗಳಲ್ಲ; ಅವು ಮಕ್ಕಳ ಮನದ ಭಾವನೆಗಳ ಸುಂದರ ಪ್ರತಿಬಿಂಬಗಳು. ಮುದ್ರಿತ ಅಕ್ಷರಗಳಿಗಿಂತ ಕೈಬರಹದ ಅಕ್ಷರಗಳಿಗೆ ಒಂದು ವಿಶಿಷ್ಟವಾದ ಸೌಂದರ್ಯವಿದೆ. ಪ್ರತಿಯೊಂದು ಅಕ್ಷರದಲ್ಲಿಯೂ ಮಗುವಿನ ಪರಿಶ್ರಮ, ಕಲ್ಪನೆ, ಸೃಜನಶೀಲತೆ, ಆಸಕ್ತಿ ಹಾಗೂ ಅಭಿವ್ಯಕ್ತಿಯ ಛಾಪು ಅಡಗಿರುತ್ತದೆ.



‘ಬೆಳಕು’ ಮತ್ತು ‘ಅಕ್ಷರಧಾರೆ’ ಕೇವಲ ಹಸ್ತಪತ್ರಿಕೆಗಳಲ್ಲ; ಇವು ಮಕ್ಕಳ ಸುಪ್ತ ಪ್ರತಿಭೆಗೆ ಕನ್ನಡಿ ಹಿಡಿಯುವ ಸೃಜನಶೀಲ ವೇದಿಕೆಗಳು. ಕಂಪ್ಯೂಟರ್ನ ಮುದ್ರಿತ ಅಕ್ಷರಗಳ ಬದಲಿಗೆ ಮಕ್ಕಳೇ ತಮ್ಮ ಮುದ್ದಾದ ಕೈಬರಹದಲ್ಲಿ ಬರೆದಿರುವ ಕವನ, ಕಥೆ, ಲೇಖನ, ಚುಟುಕು, ಗಾದೆ, ಒಗಟು ಹಾಗೂ ನುಡಿಮುತ್ತುಗಳು ಈ ಪತ್ರಿಕೆಗಳ ಜೀವಾಳವಾಗಿವೆ.

ಪ್ರತಿಯೊಂದು ಪುಟವೂ ಒಂದೊಂದು ಮಗುವಿನ ಕಲ್ಪನೆಯ ಲೋಕವನ್ನು ತೆರೆದಿಡುತ್ತದೆ. ಅಕ್ಷರಗಳ ಅಂದ, ಪದಗಳ ಮಧುರತೆ, ಚಿತ್ರಗಳ ಬಣ್ಣ ಹಾಗೂ ಬರಹಗಳ ವೈವಿಧ್ಯ ಮಕ್ಕಳ ಕಲಾತ್ಮಕ ಮನಸ್ಸಿನ ಅನಾವರಣಕ್ಕೆ ಸಾಕ್ಷಿಯಾಗಿವೆ. ಕೈಬರಹದಲ್ಲಿ ಮೂಡಿದ ಅಕ್ಷರಗಳಿಗೆ ಕೇವಲ ರೂಪವಲ್ಲ, ಭಾವನೆಯ ಸ್ಪರ್ಶವೂ ಇರುತ್ತದೆ. ಮುದ್ರಿತ ಅಕ್ಷರಗಳು ಜ್ಞಾನವನ್ನು ಸಾರಿದರೆ, ಕೈಬರಹದ ಅಕ್ಷರಗಳು ಪ್ರತಿಭೆಯನ್ನು ಪರಿಚಯಿಸುತ್ತವೆ.
ಮಕ್ಕಳ ಕೈಯಲ್ಲಿ ಅರಳಿದ ಅಕ್ಷರಗಳೇ ನಾಳಿನ ಸಾಹಿತ್ಯದ ಸುಂದರ ಮೊಗ್ಗುಗಳು. ಪ್ರತಿಯೊಂದು ಅಕ್ಷರವೂ ಒಂದು ಕನಸು, ಪ್ರತಿಯೊಂದು ಪುಟವೂ ಒಂದು ಪ್ರತಿಭೆಯ ಅನಾವರಣ. ‘ಬೆಳಕು’ ಜ್ಞಾನದ ದೀಪವಾದರೆ, ‘ಅಕ್ಷರಧಾರೆ’ ಸೃಜನಶೀಲತೆಯ ನಿರಂತರ ಹರಿವು. ಇವೆರಡೂ ಮಕ್ಕಳ ಕಲ್ಪನೆ, ಕಲೆ ಮತ್ತು ಕನ್ನಡಾಭಿಮಾನವನ್ನು ಬೆಳೆಸುವ ಅಕ್ಷರಯಜ್ಞಗಳಾಗಲಿ. ಅಕ್ಷರಗಳಲ್ಲಿ ಅಭಿರುಚಿ, ಬರಹಗಳಲ್ಲಿ ಸೃಜನಶೀಲತೆ ಹಾಗೂ ಮನಗಳಲ್ಲಿ ಕನ್ನಡದ ಪ್ರೀತಿ ಸದಾ ಬೆಳಗಲಿ” ಎಂದು ಹಾರೈಸಿ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಕಾಸರಗೋಡು ಜಿಲ್ಲಾಧ್ಯಕ್ಷರೂ, ಪ್ರಶಾಂತಿ ಸೇವಾ ಟ್ರಸ್ಟ್ನ ವ್ಯವಸ್ಥಾಪಕರೂ ಆಗಿರುವ ಶ್ರೀ ಎಚ್. ಮಹಾಲಿಂಗ ಭಟ್, ಟ್ರಸ್ಟ್ ಸದಸ್ಯರಾದ ಪಯ್ಯರಕೋಡಿ ಶ್ರೀ ಸದಾಶಿವ ಭಟ್, ಶ್ರೀ ಕೃಷ್ಣಕುಮಾರ್ ಬಲ್ಲಾಳ್, ಕೋಶಾಧಿಕಾರಿ ಯಾದ ಮಾಣಿಪ್ಪಾಡಿ ಶ್ರೀ ನಾರಾಯಣ ಭಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಶ್ರೀ ರಾಮ್ ಭಟ್, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಶ್ರೀಹರಿ ಭಟ್, ಪ್ರಾಂಶುಪಾಲರಾದ ಶ್ರೀ ವಾಮನನ್ ಹಾಗೂ ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಕ್ ಉಪಸ್ಥಿತರಿದ್ದರು.
ವೇದಪಠಣದೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಶಿಕ್ಷಕರಾದ ಶ್ರೀ ರಾಮಕೃಷ್ಣ ಬಲ್ಲಾಳ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಸಂಘ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಸ್ಮರಣಿಕೆಯೊಂದಿಗೆ ನಗದು ಬಹುಮಾನ ನೀಡಲಾಯಿತು ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಶ್ರೀಹರಿ ಭಟ್ ವಂದನಾರ್ಪಣೆಗೈದರು. ಕನ್ನಡ ಶಿಕ್ಷಕರಾದ ಶ್ರೀ ನಿತ್ಯಾನಂದ ಕೆ. ಆರ್. ಬೇಕೂರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಸತ್ಯಸಾಯಿ ಬಾಬಾ ಅವರ ಪೂಜೆ, ಮಂಗಳಾರತಿ ಹಾಗೂ ಸ್ವಾಮಿಯ ಜೂಲೋತ್ಸವ ಭಕ್ತಿಭಾವದಿಂದ ನೆರವೇರಿತು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಸತ್ಯಸಾಯಿ ಸೇವಾ ಬಂಧುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಮಕ್ಕಳ ಕೈಬರಹದಲ್ಲಿ ಅರಳಿದ ಈ ಹಸ್ತಪತ್ರಿಕೆಗಳು ಕೇವಲ ಬರಹಗಳ ಸಂಗ್ರಹವಾಗಿರದೆ, ಮಕ್ಕಳ ಸುಪ್ತ ಪ್ರತಿಭೆ, ಕನ್ನಡ ಭಾಷಾಭಿಮಾನ ಮತ್ತು ಸೃಜನಶೀಲ ಚಿಂತನೆಗಳಿಗೆ ವೇದಿಕೆಯಾಗಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

