ಬ್ರಹ್ಮಕಲಶವೆಂದರೆ ದೇವರ ದಾಸನಾಗಿ ಸೇವಕನಾಗುವ ಸುಯೋಗ: ಮಾಣಿಲ ಮೋಹನದಾಸ ಸ್ವಾಮೀಜಿ
ಕುಂಬಳೆ(ನ. 29):
ಸರೋವರ ಕ್ಷೇತ್ರ ಶ್ರೀ ಅನಂತಪುರದಲ್ಲಿ 2027 ಫೆ. 23ರಿಂದ 27ರ ತನಕ ನಡೆಯಲಿರುವ ಪ್ರತಿಷ್ಟಾ ಬ್ರಹ್ಮಕಲಶಾಭಿಷೇಕ ಹಾಗೂ ತೆಪ್ಪೋತ್ಸವ ಸಹಿತವಾದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯ ಲೋಕಾರ್ಪಣೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಇಂದು ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಮಂತ್ರಣ ಪತ್ರಿಕೆ ದೇವರಿಗರ್ಪಿಸಿದರೆ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಬಳಿಕ ನಡೆದ ಸಮಾರಂಭವನ್ನು ಕ್ಷೇತ್ರದ ಪ್ರಧಾನ ಅರ್ಚಕ ವೇ. ಮೂ. ಸುಬ್ರಹ್ಮಣ್ಯ ಭಟ್ ದೀಪ ಪ್ರಜ್ವಲನೆ ಮಾಡಿ ಚಾಲನೆ ಇತ್ತರು.

ಬ್ರಹ್ಮಕಲಶೋತ್ಸವ ಎಂದರೆ ಕೇವಲ ಅದ್ದೂರಿಯ ಆಚರಣೆಗಳಲ್ಲ. ಅದು ಅಂತರಂಗದ ಸಾಕ್ಷಾತ್ಕಾರದೊಂದಿಗೆ ಪ್ರತಿಯೊಬ್ಬನೂ ದೇವರ ದಾಸನಾಗಿ, ಸೇವಕನಾಗಿ ಸೇವೆ ಮಾಡಲು ಲಭಿಸುವ ಸುಯೋಗ. ಈ ಮೂಲಕ ಮೇಲು, ಕೀಳು ಭಾವ ತೊರೆದು, ತಾನೆಂಬ ಅಹಂ ಮರೆತು ಆತ್ಮ ಪರಿಷ್ಕಾರಗಳಾಗಬೇಕು. ದೇವರ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರೂ ಸೇವಕರೆಂಬ ಭಾವ ಜಾಗೃತಿಗೊಂಡು ಸಮಾಜದಲ್ಲಿ ಐಕ್ಯತೆ ಮೂಡುವಂಥಾ ರಚನಾತ್ಮಕ ಚಟುವಟಿಕೆಗಳಾಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ನುಡಿದರು. ಅನಂತಪುರ ಅನಂತಪದ್ಮನಾಭ ಸ್ವಾಮಿಯ ಸೇವೆಗೆ ಅವಕಾಶ ದೊರೆಯುವುದೇ ಜೀವನದ ಸುಯೋಗ. ಏಕೆಂದರೆ ಅನಂತಪುರ ಹಲವು ಮಹಿಮೆಗಳ ವೖಶಿಷ್ಟ್ಯ ಹೊಂದಿರುವ
ಅಪೂರ್ವ ಕ್ಷೇತ್ರ ಎಂದು ಸ್ವಾಮೀಜಿ ನುಡಿದರು.

ಆಮಂತ್ರಣ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ವಸಂತ ಪೖ ಬದಿಯಡ್ಕ ಮಾತನಾಡಿ ಬ್ರಹ್ಮಕಲಶದ ಮೂಲಕ ಮಾನವನಿಗೆ ದೇವ ಸಾಮೀಪ್ಯ ಸಿಗುತ್ತದೆ. ಆದರೆ ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ದೊರೆತವರು ಅಂತರಂಗ ಶುದ್ಧಿಯಿಂದ ಕರ್ತವ್ಯ ನಿರ್ವಹಿಸಿದರೆ ಅವರು ಬಹಿರಂಗದಲ್ಲಿ ಶೋಭಿಸುವಂತೆ ದೇವಾನುಗ್ರಹವಾಗುತ್ತದೆ ಎಂದರು.

ಮುಷ್ಟಿದಾನ..
ಆಮಂತ್ರಣ ಪತ್ರಿಕೆ ಲೋಕಾರ್ಪಣೆ ಎಂದರೆ ಆರ್ಥಿಕ ನಿಧಿ ಸಂಚಯದ ಆರಂಭ ಎಂದರ್ಥ ಎನ್ನುತ್ತಾ ಕ್ಷೇತ್ರಕ್ಕೆ ಅಕ್ಷಯ ನಿಧಿ ಹರಿದು ಬರಲಿ ಎಂದು ಆಶಿಸಿ ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಮಂತ್ರಾಕ್ಷತೆ ಸಹಿತವಾದ ಮುಷ್ಟಿ ಕಾಣಿಕೆ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಪೆರ್ಣೆ ಮುಷ್ಟಿ ಕಾಣಿಕೆ ಸ್ವೀಕರಿಸಿಕೊಂಡರು.
ಇದೇ ಸಂದರ್ಭ ಬ್ರಹ್ಮಕಲಶೋತ್ಸವ ಆರ್ಥಿಕ ಸಮಿತಿ ಉಪಾಧ್ಯಕ್ಷ, ಉದ್ಯಮಿ ಮಧುಸೂಧನ ಆಯರ್ ಮಂಗಳೂರು ಇವರು 1ಲಕ್ಷ ರೂ. ಗಳ ದಾನವನ್ನು ಬ್ರಹ್ಮಕಲಶೋತ್ಸವಕ್ಕೆ ಸಮರ್ಪಿಸಿದರು.

ಬ್ರಹ್ಮಕಲಶಾಭಿಷೇಕ ಉತ್ಸವಕ್ಕೆ 32 ಪುಟಗಳ ಆಮಂತ್ರಣ ಪತ್ರಿಕೆ ರಚಿಸಲಾಗಿದ್ದು, ಬೆಂಗಳೂರಿನ ಪ್ರಶಾಂತಿ ಯೂನಿಫಾರ್ಮ್ಸ್ ಸಂಸ್ಥೆ ಪ್ರಾಯೋಜಿಸಿದೆ. ಸಂಸ್ಥೆಯ ಪ್ರತಿನಿಧಿ ಪ್ರಿಯಾ ಗಣಪತಿ ವಿ. ಅಯ್ಯರ್ ಬೆಂಗಳೂರು ಅತಿಥಿಯಾಗಿ ಪಾಲ್ಗೊಂಡರು. ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದರು. ಕಾರ್ಯಾಧ್ಯಕ್ಷ ಮಾಧವ ಕಾರಂತ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಅನಂತಪುರ, ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ದಯಾರಾಜ್, ಆರ್ಥಿಕ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಕ್ಷೇತ್ರದ ನಿಕಟ ಪೂರ್ವ ಆಡಳಿತ ಸಮಿತಿ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಕಣ್ಣೂರು, ವಾರ್ಡು ಪ್ರತಿನಿಧಿ ಸತೀಶ ಪೆರ್ಣೆ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಪೆರ್ಣೆ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಸತ್ಯಶಂಕರ ಅನಂತಪುರ ಸ್ವಾಗತಿಸಿದರು. ಮಾಧ್ಯಮ ಸಮಿತಿ ಅಧ್ಯಕ್ಷ ಎಂ. ನಾ. ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಸಂಚಾಲಕ ಸುನಿಲ್ ಅನಂತಪುರ ವಂದಿಸಿದರು. ಅನಂತಶ್ರೀ ಬಾಲಗೋಕುಲದ ಮಕ್ಕಳ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತ್ತು.


