ಮಂಜೇಶ್ವರ : ಕೇರಳ ಕಲೋತ್ಸವದ ಅಂಗವಾಗಿ ಮಂಜೇಶ್ವರದಲ್ಲಿ ಆಯೋಜಿಸಲಾದ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಲೋತ್ಸವದಲ್ಲಿ ಭಾಗವಹಿಸಿ ವಿಜೇತರಾಗಿದ್ದ ಮಕ್ಕಳಿಗೆ ಹಾಗೂ ಯುವಕರಿಗೆ ನೀಡಲಾದ ಪ್ರಮಾಣಪತ್ರ ಮತ್ತು ಟ್ರೋಫಿಗಳ ಗುಣಮಟ್ಟ ಸಂಬಂಧಿಸಿದಂತೆ ಹಲವು ಗಂಭೀರ ದೂರುಗಳು ಕೇಳಿ ಬಂದಿದೆ.ಈ ಕಾರ್ಯಕ್ರಮಕ್ಕೆ ಪಂಚಾಯತ್ ಫಂಡ್ನಿಂದ ರೂ. 1,50,000 ಬಜೆಟ್ ಮಂಜೂರಾಗಿದ್ದರೂ, ವಿತರಿಸಲಾದ ಪ್ರಶಸ್ತಿಗಳ ಗುಣಮಟ್ಟ ಮತ್ತು ಅವುಗಳ ಪೂರ್ಣತೆಯ ಕೊರತೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಿಜೇತರಿಗೆ ವಿತರಿಸಲಾದ ಪ್ರಮಾಣಪತ್ರಗಳಲ್ಲಿ ಸ್ಪರ್ಧಾಳುವಿನ ಹೆಸರು ದಾಖಲಿಸದೇ ಇರುವುದು ಬಾರೀ ವಿವಾದಕ್ಕೆ ಕಾರಣವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವಿದ್ಯಾರ್ಥಿಗಳವರೆಗೂ ಎಲ್ಲರಿಗೂ ಒಂದೇ ರೀತಿಯ, ಅರ್ಧಕ್ಕೇ ಸಿದ್ಧವಾಗಿರುವ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಇದು ಕೇವಲ ನಿರ್ಲಕ್ಷ್ಯವಲ್ಲ ಕಲಾವಿದರ ಪರಿಶ್ರಮಕ್ಕೆ ಕಪ್ಪು ಚುಕ್ಕೆ ಎಂಬುದಾಗಿ ಸ್ಥಳೀಯರು ಹೇಳುತಿದ್ದಾರೆ.ವಿಜೇತರಿಗೆ ನೀಡಲಾದ ಟ್ರೋಫಿಗಳು ಮುಚ್ಚಳವಿಲ್ಲದ, ಅಸಮರ್ಪಕ ಮತ್ತು ಕಳಪೆ ಗುಣಮಟ್ಟದಾಗಿತ್ತೆಂದು ಪೋಷಕರು ಹಾಗೂ ಸ್ಪರ್ಧಾಳುಗಳು ಹೇಳಿದ್ದಾರೆ.ಕೆಲವು ಟ್ರೋಫಿಗಳು ವಿತರಿಸುವ ವೇಳೆಯಲ್ಲೇ ಹಾನಿಗೊಳಗಾಗಿದ್ದುದೂ ವರದಿಯಾಗಿದೆ.
ಸುಸಜ್ಜಿತ ಕಲೋತ್ಸವದಲ್ಲಿ ಉತ್ತಮ ಮಟ್ಟದ ಗೌರವ ನಿರೀಕ್ಷಿಸಿ ಭಾಗವಹಿಸಿದ್ದವರಿಗೆ ನೀಡಿದ ಪ್ರಶಸ್ತಿಗಳು ಅವರನ್ನು ನೈತಿಕವಾಗಿ ನೋಯಿಸುವ ಅವಮಾನಿಸುವ ರೀತಿಯದ್ದಾದ ಹಿನ್ನೆಲೆಯಲ್ಲಿ ಪೋಷಕರಲ್ಲಿ ನಿರಾಸೆ ಹಾಗೂ ವಿದ್ಯಾರ್ಥಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.ಈ ಸಮಾರಂಭಕ್ಕಾಗಿ ಪಂಚಾಯತ್ತು ರೂ. 1.5 ಲಕ್ಷ ಫಂಡ್ ನೀಡಲಾಗಿದ್ದರೂವಿತರಿಸಲಾದ ಪ್ರಮಾಣಪತ್ರ ಮತ್ತು ಟ್ರೋಫಿಗಳ ಮಟ್ಟವು ಆ ಬಜೆಟ್ಗೆ ಹೊಂದಿಕೆಯಾಗದಂತಿರುವುದು ಅನುಮಾನಕ್ಕೆ ಕಾರಣವಾಗಿದೆ.ಅದೇ ರೀತಿ ಹಣ ಬಳಕೆಯ ಪಾರದರ್ಶಕತೆ ಇಲ್ಲದೇ ಇರುವುದು ಹಣದ ದುರುಪಯೋಗದ ಬಗ್ಗೆ ಶಂಕೆಯನ್ನು ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖಾ ಸಮಿತಿ ರಚಿಸಿ ಹಣಕಾಸು ಬಳಕೆ ಮತ್ತು ಖರೀದಿ ಪ್ರಕ್ರಿಯೆ ಪರಿಶೀಲಿಸಬೇಕು, ಹೆಸರು ಸೇರಿಸದ ಪ್ರಮಾಣಪತ್ರಗಳನ್ನು ತಕ್ಷಣವೇ ಸರಿಯಾದ ನಾಮಾವಳಿಯೊಂದಿಗೆ ಮರುಮುದ್ರಿಸಿ ಸ್ಪರ್ಧಾಳುಗಳಿಗೆ ವಿತರಿಸಬೇಕು, ಕಳಪೆ ಗುಣಮಟ್ಟದ ಟ್ರೋಫಿಗಳ ಬದಲಿಗೆ ಹೊಸ ಉತ್ತಮ ಗುಣಮಟ್ಟದ ಟ್ರೋಫಿಗಳನ್ನು ನೀಡಬೇಕು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪಾರದರ್ಶಕ ವ್ಯವಸ್ಥೆ ರೂಪಿಸಬೇಕು.ಸಂಘಟಕರಿಂದ ಸಾರ್ವಜನಿಕ ಕ್ಷಮೆಯಾಚನೆ ಹಾಗೂ ವಿವರ ನೀಡುವಂತೆ ಒತ್ತಾಯಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.