ಮಂಜೇಶ್ವರ: ಉಪ್ಪಳ ಮಂಗಲ್ಪಾಡಿ ಪೆರಿಂಗಡಿಯಲ್ಲಿ ಕೊಳದಲ್ಲಿ ಈಜುವಾಗ ವಿದ್ಯಾರ್ಥಿಯೊಬ್ಬ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.ಪೆರಿಂಗಡಿಯ ಅಲಿ ಹಾಗೂ ಸುಲೈಖ ದಂಪತಿಯ ಪುತ್ರ ಅಬೂಬಕರ್ ಅಸಾನ್ (13) ಮೃತಪಟ್ಟ ದುರ್ದೈವಿ.ಈತ ಮಂಗಲ್ಪಾಡಿ ಸರಕಾರಿ ಹೈಸ್ಕೂಲ್‌ನಲ್ಲಿ ಎಂಟನೇ ತರಗತಿ ಓದುತ್ತಿದ್ದನು.

ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಸ್ನೇಹಿತರೊಂದಿಗೆ ಕೊಳದಲ್ಲಿ ಈಜಲು ತೆರಳಿದ್ದ ಅಬೂಬಕರ್, ಎಲ್ಲರೂ ಸ್ನಾನ ಮುಗಿಸಿ ಮರಳಲು ಸಿದ್ಧರಾಗುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಹೋಗಿದ್ದಾನೆ.

ನಂತರ ವಿದ್ಯಾರ್ಥಿ ನಾಪತ್ತೆಯಾಗಿರುವುದನ್ನು ಕಂಡು ನಡೆಸಿದ ಹುಡುಕಾಟದಲ್ಲಿ, ಸಮೀಪದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬಾಲಕ ಕೊಳದಲ್ಲಿ ಮುಳುಗುತ್ತಿರುವುದು ಪತ್ತೆಯಾಗಿದೆ.

ತಕ್ಷಣ ಸ್ಥಳೀಯರು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೊಳದಲ್ಲಿ ಶೋಧ ಕಾರ್ಯ ನಡೆಸಿ, ರಾತ್ರಿ 10 ಗಂಟೆ ಸುಮಾರಿಗೆ ಬಾಲಕನನ್ನು ಪತ್ತೆಹಚ್ಚಿದರು.ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

