ಮಂಜೇಶ್ವರ : ಸಾರ್ವಜನಿಕರ ತೆರಿಗೆ ಹಣದಲ್ಲಿ ಗ್ರಾಮದ ವಿಕಾಸಕ್ಕಾಗಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಸಮಾಜಘಾತಕ, ವಿಕೃತ ಮನಸ್ಸಿನ ದಂಡಪಿಂಡಗಳು ತಡರಾತ್ರಿ ತಮ್ಮ ಪುಂಡಾಟಿಕೆ ಮೆರೆದಿರುವ ನಾಚಿಕೆಗೇಡಿನ ಘಟನೆ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಕಾಸರಗೋಡು ಜಿಲ್ಲಾ ಪಂಚಾಯತ್ ನಿಧಿಯಿಂದ ಬಾರೋಡಿಸಿದ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳ್ಳುತ್ತಿದ್ದ ಪೆರ್ಮನಂಜಿ – ಮುಡಿಮಾರು ರಸ್ತೆಯ ಮೇಲೆ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಇನ್ನೋವಾ ಕಾರು ಚಲಾಯಿಸಿ, ರಸ್ತೆಯನ್ನು ಸಂಪೂರ್ಣವಾಗಿ ಹಾಳುಗೆಡವಿ ಅಟ್ಟಹಾಸ ಮೆರೆದಿದ್ದಾರೆ.
ಪೆರ್ಮನಂಜಿ – ಮುಡಿಮಾರು ರಸ್ತೆಯ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಂಕ್ರೀಟ್ ಹಸಿಯಾಗಿದ್ದರಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಸಾರ್ವಜನಿಕರ ಮಾಹಿತಿಗಾಗಿ ರಸ್ತೆಯ ಎರಡೂ ಬದಿಗಳಲ್ಲಿ ಶಾಸ್ತ್ರೀಯವಾಗಿ ತಡೆಗಳನ್ನು ಬ್ಯಾರಿಕೇಡ್ ಅಳವಡಿಸಿ, ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿತ್ತು. ಆದರೆ, ಕಾನೂನು ಮತ್ತು ಸಮಾಜದ ಬಗ್ಗೆ ಯಾವುದೇ ಭಯವಿಲ್ಲದ ಈ ಕಿಡಿಗೇಡಿಗಳು, ತಡೆಗಳನ್ನು ಬಲವಂತವಾಗಿ ತೆರವುಗೊಳಿಸಿ, ಹಸಿ ಕಾಂಕ್ರೀಟ್ ಮೇಲೆ ವೇಗವಾಗಿ ಇನ್ನೋವಾ ಕಾರನ್ನು ಚಲಾಯಿಸಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೂತನ ರಸ್ತೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಗುಂಡಿಬಿದ್ದು ಹಾಳಾಗಿದೆ.

ಗ್ರಾಮೀಣ ಭಾಗದ ಸುಲಭ ಸಂಚಾರಕ್ಕಾಗಿ ಸಾರ್ವಜನಿಕರ ಸುದೀರ್ಘ ಹೋರಾಟ ಹಾಗೂ ಶ್ರಮದ ಫಲವಾಗಿ ಜಿಲ್ಲಾ ಪಂಚಾಯತ್ ನಿಧಿ ಬಿಡುಗಡೆಯಾಗಿ ಈ ರಸ್ತೆ ನಿರ್ಮಾಣಗೊಳ್ಳುತ್ತಿತ್ತು. ಆದರೆ, ನಾಡಿನ ಅಭಿವೃದ್ಧಿಯನ್ನು ಸಹಿಸದ ಇಂತಹ ದಂಡಪಿಂಡಗಳ ವಿಕೃತ ಮನಸ್ಥಿತಿಯಿಂದಾಗಿ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸ್ಥಳೀಯ ನಾಗರಿಕರು, “ಇದು ಕೇವಲ ರಸ್ತೆಗೆ ಮಾಡಿದ ಹಾನಿಯಲ್ಲ, ಇಡೀ ನಾಡಿನ ಅಭಿವೃದ್ಧಿಗೆ ಎಸಗಿದ ದ್ರೋಹ. ಇಂತಹ ಸಮಾಜಘಾತಕ ಶಕ್ತಿಗಳನ್ನು ತಕ್ಷಣವೇ ಮಟ್ಟಹಾಕಬೇಕು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಂತಹ ದುಷ್ಟ ಕೃತ್ಯಗಳು ಮರುಕಳಿಸದಂತೆ ತಡೆಯಲು ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿಯಬೇಕಿದೆ. ಘಟನೆಗೆ ಬಳಸಲಾದ ಇನ್ನೋವಾ ಕಾರು ಹಾಗೂ ಅದರಲ್ಲಿದ್ದ ದುಷ್ಕರ್ಮಿಗಳನ್ನು ಸಿಸಿಟಿವಿ ದೃಶ್ಯಾವಳಿ ಹಾಗೂ ಸೂಕ್ತ ತನಿಖೆಯ ಮೂಲಕ ತಕ್ಷಣವೇ ಪತ್ತೆಹಚ್ಚಿ, ಬಂಧಿಸಬೇಕು. ರಸ್ತೆಗೆ ಉಂಟಾದ ನಷ್ಟವನ್ನು ಈ ದುಷ್ಕರ್ಮಿಗಳಿಂದಲೇ ವಸೂಲಿ ಮಾಡುವುದರ ಜೊತೆಗೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಿ ಜಾಮೀನು ಸಿಗದಂತೆ ಜೈಲಿಗಟ್ಟಬೇಕೆಂದು ವರ್ಕಾಡಿಯ ನಾಗರಿಕರು ಬಲವಾಗಿ ಆಗ್ರಹಿಸಿದ್ದಾರೆ.

