ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ (ರಿ.) ಮಂಜೇಶ್ವರ ವತಿಯಿಂದ 106ನೇ ಸೇವಾ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ₹30 ಸಾವಿರ ನೆರವು ನೀಡಲಾಗಿದೆ.

ಕಾಸರಗೋಡು ತಾಲೂಕಿನ ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ದೇಲಂಪಾಡಿ ನಿವಾಸಿ ಕೃಷ್ಣ ರೈ ಅವರು ಅಲ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಪತ್ನಿ ಬೌದ್ಧಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಅವರ 13 ವರ್ಷದ ಹಿರಿಯ ಮಗನೂ ಬೌದ್ಧಿಕ ಅಸ್ವಸ್ಥತೆಯನ್ನು ಹೊಂದಿದ್ದಾನೆ. ಕುಟುಂಬಕ್ಕೆ ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಸರ್ಕಾರದಿಂದಲೂ ಮನೆ ಸೌಲಭ್ಯ ದೊರೆಯದ ಹಿನ್ನೆಲೆಯಲ್ಲಿ ಕುಟುಂಬ ಸಂಕಷ್ಟದ ಜೀವನ ನಡೆಸುತ್ತಿದೆ.

ಕುಟುಂಬದ ಶೋಚನೀಯ ಸ್ಥಿತಿಯನ್ನು ಅರಿತ ಸಂಸ್ಥೆಯ ಸದಸ್ಯರು ನೆರವಿಗೆ ಮುಂದಾಗಿದ್ದು, ₹30 ಸಾವಿರದ ನೆರವಿನ ಮೊತ್ತವನ್ನು ನ್ಯಾಯವಾದಿ ನವೀನ್ ರಾಜ್ ಅವರು ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಆಶಾ ಲೋಕೇಶ್ ಮಾಡ, ರಮಿತಾ ಅಂಬಿತಡಿ, ಸರಸ್ವತಿ ಉದ್ಯಾವರ, ಅಂಕಿತ್ ಪಾವೂರು ಹಾಗೂ ಪ್ರದೀಪ್ ಮೊರತ್ತನೆ ಉಪಸ್ಥಿತರಿದ್ದರು.
ಸಮಾಜದ ಸಂಕಷ್ಟದಲ್ಲಿರುವವರ ನೆರವಿಗೆ ಸದಾ ಸ್ಪಂದಿಸುವ ಉದ್ದೇಶದಿಂದ ಸಂಸ್ಥೆಯು ಸೇವಾ ಕಾರ್ಯಗಳನ್ನು ಮುಂದುವರಿಸುತ್ತಿದ್ದು, ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.

