ಉಪ್ಪಳ: ಜನನಿಬಿಡ ಉಪ್ಪಳ ಬಸ್ ನಿಲ್ದಾಣದಲ್ಲಿ ವ್ಯಾಪಾರಿಯೊಬ್ಬರ ಮೇಲೆ ಖಾಸಗಿ ಬಸ್ ಚಾಲಕ ಹಲ್ಲೆ ನಡೆಸಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಉಪ್ಪಳದಲ್ಲಿ ‘ಸ್ಟ್ಯಾಂಡರ್ಡ್ ಬೇಕರಿ’ ಎಂಬ ಅಂಗಡಿ ನಡೆಸುತ್ತಿರುವ ವ್ಯಾಪಾರಿ ಅಬ್ದುಲ್ಲಾ ಹಲ್ಲೆಗೊಳಗಾದವರು. ಘಟನೆಯಲ್ಲಿ ಅವರ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಮತ್ತು ಇತರ ವ್ಯಾಪಾರಿಗಳು ಸೇರಿ ಅವರನ್ನು ತಕ್ಷಣ ಕುಂಬಳೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಸರಗೋಡಿನಿಂದ ಉಪ್ಪಳಕ್ಕೆ ಆಗಮಿಸುತ್ತಿದ್ದ ‘ಗಜಾನನ’ ಖಾಸಗಿ ಬಸ್‌ನ ಚಾಲಕನೇ ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಬಸ್ ನಿಲ್ದಾಣದಲ್ಲಿ ಉಂಟಾದ ಸಣ್ಣ ಮಟ್ಟದ ಮಾತಿನ ಚಕಮಕಿ ಬಳಿಕ ಹಲ್ಲೆಗೆ ತಿರುಗಿದೆ ಎನ್ನಲಾಗಿದೆ. ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ ಬಳಿಕ ಘಟನೆಯನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಉದ್ದೇಶದಿಂದ ಚಾಲಕನೇ ತನ್ನ ಬಸ್ಸಿನ ಮುಂಭಾಗದ ಗಾಜನ್ನು ಒಡೆದು ಹಾಕಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಘಟನೆಯ ಬೆನ್ನಲ್ಲೇ ಉಪ್ಪಳ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರಿಗಳು ಮತ್ತು ಸ್ಥಳೀಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಉಪ್ಪಳ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಹಲ್ಲೆ ಹಾಗೂ ಸಂಘರ್ಷದ ಘಟನೆಗಳು ನಡೆಯುತ್ತಿದ್ದರೂ ಸೂಕ್ತ ಪೊಲೀಸ್ ಭದ್ರತೆ ಇಲ್ಲ ಎಂಬುದು ವ್ಯಾಪಾರಿಗಳ ಪ್ರಮುಖ ಆರೋಪವಾಗಿದೆ.

ಕನಿಷ್ಠ ಹತ್ತು ಮಂದಿ ಪೊಲೀಸರನ್ನು ನಿಯೋಜಿಸಬೇಕಾದ ಬಸ್ ನಿಲ್ದಾಣದ ಪೊಲೀಸ್ ಎಯ್ಡ್ ಪೋಸ್ಟ್‌ನಲ್ಲಿ ಪ್ರಸ್ತುತ ಕೇವಲ ಇಬ್ಬರು ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದಿರುವುದರಿಂದ ಕಿಡಿಗೇಡಿಗಳು ಹಾಗೂ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಯಾವುದೇ ಭಯವಿಲ್ಲದಂತಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪೊಲೀಸ್ ಎಯ್ಡ್ ಪೋಸ್ಟ್‌ನಲ್ಲಿ ಸಿಬ್ಬಂದಿ ಸಂಖ್ಯೆಯನ್ನು ತಕ್ಷಣ ಹೆಚ್ಚಿಸಬೇಕು ಹಾಗೂ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ ಬಸ್ ಚಾಲಕನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಘಟನೆಯಿಂದಾಗಿ ಉಪ್ಪಳದಲ್ಲಿ ವ್ಯಾಪಾರಿಗಳ ಸುರಕ್ಷತೆ ಮತ್ತು ಪೊಲೀಸ್ ಭದ್ರತೆಯ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

