ಮಂಜೇಶ್ವರ: ಮಂಜೇಶ್ವರದ ಪೀಸ್ ಕ್ರಿಯೇಟಿವ್ ಶಾಲೆಯ ವತಿಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಪ್ರವಾಸಿ ತಾಣಗಳಿಗೆ ಅತ್ಯಂತ ಸಡಗರ ಹಾಗೂ ಸಂಭ್ರಮದ ಶೈಕ್ಷಣಿಕ ಪ್ರವಾಸವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ತರಗತಿಗಳ ವಯೋಮಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಪ್ರಕೃತಿಯ ಮಡಿಲಿಗೆ ಕರೆದೊಯ್ಯಲಾಯಿತು.
ಶಾಲೆಯ ಪುಟಾಣಿ ಮಕ್ಕಳಾದ ಕೆ.ಜಿ ವಿಭಾಗದಿಂದ 3ನೇ ತರಗತಿ ತನಕದ ವಿದ್ಯಾರ್ಥಿಗಳನ್ನು ಕಾಸರಗೋಡು ಜಿಲ್ಲೆಯ ತ್ರಿಕರಿಪ್ಪುರದಲ್ಲಿರುವ ಆಕರ್ಷಕ ‘ವಿ-ಲ್ಯಾಂಡ್’ ಮನರಂಜನಾ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಬಣ್ಣಬಣ್ಣದ ಆಟಿಕೆಗಳು, ಜಲಕ್ರೀಡೆಗಳು ಹಾಗೂ ಮಕ್ಕಳ ಮನಸ್ಸಿಗೆ ಮುದ ನೀಡುವ ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಪುಟಾಣಿಗಳು ಉತ್ಸಾಹದಿಂದ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು.


4 ರಿಂದ 9ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ಕೇರಳದ ಪ್ರಕೃತಿ ಸೌಂದರ್ಯದ ತವರು ಎಂದೇ ಖ್ಯಾತಿ ಪಡೆದಿರುವ ‘ವಯನಾಡಿಗೆ’ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಮಂಜು ಮುಸುಕಿದ ಬೆಟ್ಟಗುಡ್ಡಗಳು, ಹಚ್ಚಹಸಿರಿನ ಚಹಾ ತೋಟಗಳು, ಜುಳುಜುಳು ಹರಿಯುವ ಜಲಪಾತಗಳು ಹಾಗೂ ವನ್ಯಜೀವಿ ಧಾಮಗಳ ಸೊಬಗನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.

ಪ್ರಕೃತಿಯ ವಿಸ್ಮಯಗಳನ್ನು ಹತ್ತಿರದಿಂದ ವೀಕ್ಷಿಸಿದ ಮಕ್ಕಳು, ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆಯೂ ಪ್ರಾಯೋಗಿಕ ಜ್ಞಾನ ಪಡೆದುಕೊಂಡರು.

ಶಾಲೆಯ ಹಿರಿಯ ವಿದ್ಯಾರ್ಥಿಗಳಾದ 10ನೇ ತರಗತಿಯ ಮಕ್ಕಳಿಗೆ ತಮಿಳುನಾಡಿನ ಪ್ರಸಿದ್ಧ ಗಿರಿಧಾಮ ‘ಕೊಡೈಕೆನಾಲ್ಗೆ’ ವಿಶೇಷ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗಿತ್ತು. ‘ಗಿರಿಧಾಮಗಳ ರಾಣಿ’ ಎಂದೇ ಕರೆಯಲ್ಪಡುವ ಕೊಡೈಕೆನಾಲ್ನ ತಂಪಾದ ಹವಾಮಾನ, ಆಕಾಶಕ್ಕೆ ಮುತ್ತಿಕ್ಕುವಂತಿರುವ ಪೈನ್ ಮರಗಳ ಸಾಲು, ಮಂಜಿನ ಹನಿಗಳ ನಡುವೆ ಕಂಗೊಳಿಸುವ ಕೊಡೈ ಸರೋವರ, ಗುಣ ಗುಹೆಗಳು ಮತ್ತು ಬೆಟ್ಟದ ತುದಿಯ ನೋಟಗಳು ವಿದ್ಯಾರ್ಥಿಗಳಿಗೆ ಮರೆಯಲಾಗದ ಅನುಭವವನ್ನು ನೀಡಿದವು.

ಪರೀಕ್ಷಾ ಒತ್ತಡದ ನಡುವೆ ಈ ಪ್ರವಾಸವು ವಿದ್ಯಾರ್ಥಿಗಳಿಗೆ ಹೊಸ ಚೈತನ್ಯವನ್ನು ತುಂಬಿತು.

ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರ ಅಚ್ಚುಕಟ್ಟಾದ ಮಾರ್ಗದರ್ಶನ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ನಡೆದ ಈ ಪ್ರವಾಸವು, ವಿದ್ಯಾರ್ಥಿಗಳಿಗೆ ಕೇವಲ ಮನರಂಜನೆ ಮಾತ್ರವಲ್ಲದೆ ಜ್ಞಾನಾರ್ಜನೆ ಮತ್ತು ಹೊಸ ಅನುಭವಗಳ ಬುತ್ತಿಯನ್ನು ನೀಡುವಲ್ಲಿ ಯಶಸ್ವಿಯಾಯಿತು.

