ತಿರುವನಂತಪುರಂ : ಉಪಚುನಾವಣೆ ನಡೆಯುವ ನಿಲಂಬೂರ್ ಕ್ಷೇತ್ರದ ಮಾಜಿ ಶಾಸಕ
ಪಿ ವಿ ಅನ್ವರ್ ಯು ಡಿ ಎಫ್ ಗೆ ಸೇರುವ ಬಗ್ಗೆ ಯಾವುದೇ ತೀರ್ಮಾನ ಮಾಡದೇ ಮೀನಮೇಷ ಎಣಿಸುತ್ತಿದ್ದಾರೆ.ಈ ಮದ್ಯೆ ಅನ್ವರ್ ಆಗಮನದ ವಿಷಯ ರಾಜ್ಯ ಕಾಂಗ್ರೆಸ್ ಮನೆಯಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದ್ದು ಪಕ್ಷದ ಒಬ್ಬೊಬ್ಬ ನಾಯಕರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ವಿಧಾನ ಸಭೆಯ ವಿಪಕ್ಷ ನಾಯಕ ವಿ ಡಿ ಸತೀಶನ್ ಮಾತನಾಡಿ ಅನ್ವರ್ ಯು ಡಿ ಎಫ್ ಗೆ ಬರುವ ಬಗ್ಗೆ ಮೊದಲು ತೀರ್ಮಾನ ಮಾಡಿ ಹೇಳಿಕೆ ನೀಡಲಿ ಮತ್ತೆ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ ಎಂದಿದ್ದಾರೆ .ಇದರಿಂದ ಕುಪಿತಗೊಂಡ ಅನ್ವರ್ ನಾನು ಹಲವಾರು ಬಾರಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದು ಮತ್ತೆ ಮತ್ತೆ ನನ್ನ ಅಭಿಪ್ರಾಯವನ್ನು ಕೇಳುವುದು ಅಪಹಾಸ್ಯಕರವೆಂದು ವಿ ಡಿ ಸತೀಶನ್ ಮಾತಿಗೆ ಟೀಕೆ ವ್ಯಕ್ತ ಪಡಿಸಿದ್ದರು.
ಸತೀಶನ್ ಅಭಿಪ್ರಾಯಕ್ಕೆ ವ್ಯಕ್ತಿರಿಕ್ತವಾಗಿ ಕೆ ಪಿ ಸಿ ಸಿ ಮಾಜಿ ಅಧ್ಯಕ್ಷ ಸುಧಾಕರನ್ ಪ್ರತಿಕ್ರಿಯಿಸಿದ್ದು, ಅನ್ವರ್ ರನ್ನು ನಾವು ಗೌರವಯುತವಾಗಿ ನಡೆಸಿಕೊಳ್ಳಬೇಕೆಂದು ಯು ಡಿ ಎಫ್ ಸೇರುವ ಬಗ್ಗೆ ಪಕ್ಷ ಅವರೊಂದಿಗೆ ಸುಧೀರ್ಘ ಚರ್ಚಿಸುವ ಅಗತ್ಯವಿದೆ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ನಾಯಕ ವಿ ಎಂ ಸುಧೀರನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ವಿಲಂಬೂರ್ ನಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಆರ್ಯಾಡನ್ ಶೌಕತ್ ರ ಬಗ್ಗೆ ಅಪಹಾಸ್ಯ ಹಾಗೂ ಟೀಕೆಯನ್ನು ಮಾಡಿದ ವ್ಯಕ್ತಿಯನ್ನು ಹೇಗೆ ಪಕ್ಷಕ್ಕೆ ಸೇರಿಸಲಿ ಎಂದಿದ್ದಾರೆ.
ಅಂದರೆ ನಿಲಂಬೂರಿನಲ್ಲಿ ಯು ಡಿ ಎಫ್ ಅಭ್ಯರ್ಥಿಯಾದ ಆರ್ಯಾಡನ್ ಶೌಕತ್ ರ ಬಗ್ಗೆ ಬಹಿರಂಗವಾಗಿ ಟೀಕೆ ಮಾಡಿ ಶೌಕತ್ ಅಸಮರ್ಥ ಅಭ್ಯರ್ಥಿಯೆಂದು ಪಿ ವಿ ಅನ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ರೀತಿಯಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯ ಬಗ್ಗೆ ಲಘುವಾಗಿ ಟೀಕೆ ಮಾಡಿದ ವ್ಯಕ್ತಿಯನ್ನು ಪಕ್ಷಕ್ಕೆ ಸ್ವಾಗತಿಸಲು ಕಾಂಗ್ರೆಸ್ ಪಾಳಯದಲ್ಲಿ ಸಹಜವಾಗಿಯೇ ವ್ಯತ್ಯಸ್ತ ಅಭಿಪ್ರಾಯಗಳಿವೆ. ಕೆ ಪಿ ಸಿ ಸಿ ಮಾಜಿ ಅಧ್ಯಕ್ಷ ರಮೇಶ್ ಚೆನ್ನಿತಲ ಮಾತನಾಡಿ ಪಿ ವಿ ಅನ್ವರ್ ಈ ಮೊದಲು ನಮ್ಮ ಅಭ್ಯರ್ಥಿಯ ಬಗ್ಗೆ ಮಾಡಿದ ಟೀಕೆಯನ್ನು ಹಿಂಪಡೆದು ಸ್ಪಷ್ಟೀಕರಣ ನೀಡಲಿ ನಂತರ ಪಕ್ಷ ಸೇರ್ಪಡೆಯ ಬಗ್ಗೆ ಆಲೋಚಿಸೋಣ ಎಂದಿದ್ದಾರೆ. ಈ ಮದ್ಯೆ ತಾನು ತೃಣಮೂಲ ಕಾಂಗ್ರೆಸ್ ನಿಂದ ಸ್ಪರ್ದಿಸುವುದಾಗಿಯೂ ,ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹಿತ ವಿವಿಧ ನಾಯಕರು ತಮ್ಮ ಪ್ರಚಾರಕ್ಕೆ ಬರುತ್ತಾರೆಂದು ಪಿ ವಿ ಅನ್ವರ್ ಹೇಳಿದ್ದಾರೆ.