ಬಹು ನಿರೀಕ್ಷಿತ “ನಾನ್ ವೆಜ್“ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

ಮಂಗಳೂರು:ಜಯಕಿರಣ ಫಿಲಂಸ್ ಲಾಂಛನದಲ್ಲಿ, ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಕೆ.ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗಿರುವ ” ನಾನ್ ವೆಜ್” ತುಳು ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.ದೀಪ ಬೆಳಗಿಸಿ ಸಿನಿಮಾಕ್ಕೆ ಶುಭ ಹಾರೈಸಿದ ಹಿರಿಯ ವಕೀಲ ಮಯೂರಕೀರ್ತಿ ಅವರು, “ನನಗೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿರುವುದು ಒಬ್ಬ ನೈಜ ತುಳು ಸಿನಿಮಾ ಪ್ರೇಕ್ಷಕನಿಗೆ ಸಂದ ದೊಡ್ಡ ಗೌರವ. ನಾನು ಬಹುತೇಕ ಎಲ್ಲ ತುಳು ಸಿನಿಮಾಗಳನ್ನು ನೋಡುತ್ತೇನೆ. ಈ ಹಿಂದೆ “ಚಾಲಿಪೋಲಿಲು” ಅನ್ನುವ ತುಳು ಚಿತ್ರ ನಿರ್ಮಿಸಿ ದಾಖಲೆ ಬರೆದಿದ್ದ ಆತ್ಮೀಯ ಮಿತ್ರ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ಮಾಡಿರುವ ಈ ಸಿನಿಮಾ ಕೂಡ ಶತದಿನ ಆಚರಿಸಲಿ“ ಎಂದರು.

ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ ಶೆಟ್ಟಿ ,ಕುಸೇಲ್ದರಸೆ ನವೀನ್ ಡಿ ಪಡೀಲ್ ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ವಿರಾಟ್ ಗೌಡ, ಅರ್ಜುನ್ ಕಾಪಿಕಾಡ್, ನಿರ್ಮಾಪಕ ಮುಖೇಶ್ ಹೆಗ್ಡೆ, ಭೋಜರಾಜ್ ವಾಮಂಜೂರ್, ಕ್ಯಾಟ್ಕದ ಮಾಜಿ ಅಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್, ಅಶ್ವಿನಿ ಪ್ರಕಾಶ್, ಇಸ್ಮಾಯಿಲ್ ಮೂಡುಶೆಡ್ಡೆ, ನಿರ್ದೇಶಕ ಸೂರಜ್ ಶೆಟ್ಟಿ, ನಟ ಅಥರ್ವ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಸಿನಿಮಾ ಕುರಿತು:
“ನಾನ್ ವೆಜ್” ಸಿನಿಮಾ “ಸು ಫ್ರಂ ಸೋ” ರೀತಿಯಲ್ಲಿ ಸಂಚಲನ ಮೂಡಿಸಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ “ನಾನ್‌ವೆಜ್‌” ಸಿನಿಮಾ ಒಂದು ಅತ್ಯುತ್ತಮ ಭಿನ್ನ ಕಥಾವಸ್ತುವನ್ನು ಹೊಂದಿದೆ. ಯಾವುದನ್ನು ಮಡಿಮೈಲಿಗೆ, ಅಸಹ್ಯ ಎಂದು ಪರಿಗಣಿಸಿದ್ದೇವೆಯೋ ಅದು ಎಷ್ಟು ಅನಿವಾರ್ಯ ಮತ್ತು ಸಹಜ ಎಂಬುದು ಈ ಚಿತ್ರದ ಒಂದು ಸಂದೇಶವೂ ಆಗಿದೆ.
“ಸು ಫ್ರಂ ಸೋ” ಸಿನಿಮಾದಲ್ಲಿ ನಟಿಸಿರುವ ಕೆಲವು ಪ್ರಮುಖ ಕಲಾವಿದರು “ನಾನ್‌ವೆಜ್‌” ಸಿನಿಮಾದಲ್ಲೂ ಇದ್ದಾರೆ. ಪ್ರಕಾಶ್ ತೂಮಿನಾಡು, ಬಂದರೊ ಬಂದರು ಬಾವಾ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳೂರು, ದೀಪಕ್‌ ರೈ ಪಾಣಾಜೆ, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ಅವರು ನಾನ್‌ವೆಜ್‌ ಸಿನಿಮಾದಲ್ಲೂ ನಟಿಸಿದ್ದಾರೆ. ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ದಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ತಮ್ಮ ಅದ್ಭುತ ನಟನಾ ಕೌಶಲವನ್ನು ಪ್ರದರ್ಶಿಸಿ ದ್ದಾರೆ. ಜತೆಗೆ ಕುಸೇಲ್ದರಸೆ ನವೀನ್‌ ಡಿ. ಪಡೀಲ್‌ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಅಥರ್ವ ಪ್ರಕಾಶ್‌ ನಾನ್‌ವೆಜ್‌ನ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದಲ್ಲಿ ಮನೋರಂಜನೆಯೂ ಕಡಿಮೆ ಇಲ್ಲ, ಸಂದೇಶ – ಕಥೆಯೂ ಅದ್ಭುತ. ನಾನ್‌ವೆಜ್‌ನ ವಿಷಯವೇ ಎಲ್ಲರಿಗೂ ಖುಷಿ ಕೊಡಲಿದೆ. ಪ್ರೀತಿಯನ್ನು ಹುಡುಕುತ್ತಾ ಹೋಗುತ್ತಿರುವ ಮುಗ್ಧ ಯುವಕನೊಬ್ಬನ ಸುತ್ತ ಹೆಣೆದಿರುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಆದ ಕಾರಣ ಇದು ಯುವ ಸಮುದಾಯವನ್ನು ಸೆಳೆಯುವ ಸಾಧ್ಯತೆ ನಿಚ್ಚಳವಾಗಿದೆ. ಮಕ್ಕಳೊಂದಿಗೆ ಹೆತ್ತವರು ಜತೆಯಾಗಿ ಕುಳಿತು ನೋಡಬೇಕಾದ ಸಿನಿಮಾವಾಗಿದ್ದು, ಇದು ಮಕ್ಕಳು ದಾರಿ ತಪ್ಪುವುದನ್ನು ತಡೆಯಲಿದೆ.

ಇಡೀ ಸಿನಿಮಾದ ಕಥೆ ಹಾಗೂ ಸಂದೇಶವನ್ನು ಹಾಸ್ಯದಲ್ಲೇ ತೆಗೆದುಕೊಂಡಿರುವ ಹೋಗಿರುವುದು ಒಂದು ದೊಡ್ಡ ಪ್ಲಸ್‌ ಪಾಯಿಂಟ್‌. ಯುವಜನತೆಯ ತಳಮಳ, ಗೊಂದಲ, ಕುತೂಹಲ ಗಳನ್ನು ಮನಸ್ಪರ್ಶಿಯಾಗಿ ಚಿತ್ರಿಸಲಾಗಿದೆ. ಅದಕ್ಕೊಂದು ಸುಂದರ ಕಥೆಯ ರೂಪ, ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನೂ ನೀಡಲಾಗಿದೆ. ಲವ್ ಎಂದರೆ ಪ್ರೀತಿ. ಆದರೆ ಆ ಪ್ರೀತಿಯನ್ನು ನಾವು ಹೇಗೆಲ್ಲ ಅರ್ಥ ಮಾಡಿಕೊಳ್ಳುತ್ತೇವೆ ಹಾಗೂ ಅದಕ್ಕೆ ತಕ್ಕಂತೆ ನಾವು ಏನೇನು ಅನುಭವಿಸಬೇಕಾಗುತ್ತದೆ ಎಂಬುದನ್ನು ನಾನ್‌ವೆಜ್ ಸಿನಿಮಾದಲ್ಲಿ ನಾವು ನೋಡಬಹುದು. ಒಂದು ಶಬ್ದವನ್ನು ನಾವು ಹೇಗೆ ಅಪಥ್ಯವಾಗಿ ನೋಡುತ್ತೇವೆ ಹಾಗೂ ನಮ್ಮ ಚಿಂತನೆ ಗುಣಾತ್ಮಕತೆಯಿಂದ ಹೆಚ್ಚಾಗಿ ಋಣಾತ್ಮಕತೆಗೆ ಹೇಗೆ ಬೇಗನೆ ಹೊರಳುತ್ತದೆ ಎಂಬುದಕ್ಕೆ ಈ ಸಿನಿಮಾ ವನ್ನು ನೋಡಲೇಬೇಕು. ಪ್ರತಿಯೊಂದು ದೃಶ್ಯವೂ ಪ್ರೇಕ್ಷ ಕರನ್ನು ಸೆಳೆದಿಟ್ಟುಕೊಂಡು ಸಾಗುತ್ತದೆ ಎಂದು ಸಿನಿಮಾದ ನಿರ್ದೇಶಕ ಸೂರಜ್ ಶೆಟ್ಟಿ ತಿಳಿಸಿದರು.
ಯುವಜನತೆಯ ತಳಮಳವನ್ನು ಕೇಂದ್ರೀಕರಿಸಿಕೊಂಡು ಸಿದ್ಧಪಡಿಸಲಾಗಿರುವ ಈ ಸಿನಿಮಾವು ಕಾಲೇಜು ವಿದ್ಯಾರ್ಥಿಗಳು ಸಹಿತ ಯುವಜನಾಂಗದ ಮನ ಗೆಲ್ಲ ಬಹುದೆಂದು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.ಒಂದೇ ಬಗೆಯ ಸಿನಿಮಾಗಳನ್ನು ನೋಡಿ ಬೇಸತ್ತ ಪ್ರೇಕ್ಷಕರನ್ನು ಖುಷಿಪಡಿಸಲು ಬೇಕಾದ ಎಲ್ಲವೂ ನಾನ್‌ವೆಜ್‌ನಲ್ಲಿದೆ. ತುಳು ಸಿನಿಮಾ ರಂಗದಲ್ಲಿ ಚಾರಿತ್ರಿಕ ದಾಖಲೆ ನಿರ್ಮಿಸಿದ ಜಯಕಿರಣ ಫಿಲಂಸ್‌ರವರ ಚಾಲಿಪೋಲಿಲು ಚಿತ್ರ ತಂಡದಿಂದ “ನಾನ್‌ವೆಜ್” ಹೊರಬರುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಲು ಮತ್ತೊಂದು ಪ್ರಮುಖ ಕಾರಣ. ಇಡೀ ಸಿನಿಮಾವನ್ನು ಹಾಸ್ಯದ ಮೂಲಕ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.

ನಾನ್ ವೆಜ್ ಸಿನಿಮಾ ಮಂಗಳೂರುನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದೆ. ಮಲ್ಟಿಫ್ಲೆಕ್ಸ್ ನಲ್ಲೂ ಕೂಡ 99 ರೂ. ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!