ಮಂಜೇಶ್ವರ: ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲಾ ಸಭಾಂಗಣದಲ್ಲಿ ಕುರ್‌ಆನ್ ಸಂಪೂರ್ಣವಾಗಿ ಹೃದಯಂಗಮಗೊಳಿಸಿದ ವಿದ್ಯಾರ್ಥಿ ಹಾಫಿಝಾ ಫಾತಿಮಾ ಫಾಝಾ ಅವರನ್ನು ಶಾಲಾ ಆಡಳಿತ ಸಮಿತಿ ವತಿಯಿಂದ ನಿಮ್ಮಲ್ಲಿ ಶ್ರೇಷ್ಠರು ಯಾರು ಎಂದರೆ, ಕುರ್‌ಆನ್ ಕಲಿತು ಅದನ್ನು ಇತರರಿಗೆ ಕಲಿಸುವವರೇ” ಎಂಬ ಪ್ರವಾದಿ ವಚನದ ಸ್ಫೂರ್ತಿಯೊಂದಿಗೆ ಭಕ್ತಿಭಾವದಿಂದ ಆಯೋಜಿಸಲಾದ ಸಮಾರಂಭದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ತಲಪಾಡಿ ಕೆ ಸಿ ರೋಡ್ ನಿವಾಸಿ ಅಬ್ದುಲ್ ಕಿನಾನ್ ಹಾಗೂ ಸಾಜಿದಾ ದಂಪತಿಗಳ ಪುತ್ತಿಯಾಗಿರುವ ಹಾಫಿಝಾ ಫಾತಿಮಾ ಫಾಝಾ ಅಲ್ಪ ವಯಸ್ಸಿನಲ್ಲಿಯೇ ಸಂಪೂರ್ಣ ಕುರಾನ್ ಹಿಫ್ಝ್ ಕಂಠಪಾಠ ಮಾಡಿದ್ದಾರೆ. ಈಕೆಗೆ ಅಧ್ಯಾಪಕಿ ಹಾಫಿಝಾ ಆಸಿಯಮ್ಮ ಝುಲ್ಫ ತರಭೇತಿಯನ್ನು ನೀಡಿದ್ದರು.ಶಾಲಾ ಚೇಯರ್ಮ್ಯಾನ್ ಹಾಜಿ ಅಬ್ದುಲ್ ರಹ್ಮಾನ್ ಅರಿಮಲ ಹಾಗೂ ಪ್ರಾಂಶುಪಾಲ ಅಬ್ದುಲ್ ಖಾದರ್ ಸನ್ಮಾನಿಸಿ ಅಭಿನಂದಿಸಿದರು. ಜೊತೆಯಾಗಿ ವಿದ್ಯಾರ್ಥಿನಿಯ ಕಲಿಕೆಗೆ ಪ್ರೋತ್ಸಾಹವನ್ನು ನೀಡಿದ ಪೋಷಕರನ್ನು ಕೂಡಾ ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು
ಬಳಿಕ ಶಾಲಾ ಪ್ರಾಂಶುಪಾಲ ಅಬ್ದುಲ್ ಖಾದರ್ ರವರು ಮಾತನಾಡಿ ” ಕುರ್‌ಆನ್ ಹಿಫ್ಝ್ ಕೇವಲ ಪಠ್ಯಸ್ಮರಣೆ ಮಾತ್ರವಲ್ಲ, ಅದು ವ್ಯಕ್ತಿತ್ವ ನಿರ್ಮಾಣ, ಶಿಸ್ತು, ಧರ್ಮನಿಷ್ಠೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಮಹತ್ತರ ಸಾಧನೆಯೆಂದು ಅಭಿಪ್ರಾಯಪಟ್ಟರು. ಹಾಫಿಝಾ ಫಾತಿಮಾ ಫಾಝಾ ಅವರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದವು ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ವಿದ್ಯಾಭ್ಯಾಸ ಮತ್ತು ಧಾರ್ಮಿಕ ಸೇವೆಯಲ್ಲಿ ಇನ್ನಷ್ಟು ಉನ್ನತಿಯನ್ನು ಸಾಧಿಸಲಿ ಎಂದು ಹಾರೈಸಿದರು.