ಮನರೇಗಾ ಯೋಜನೆಯನ್ನು ಹಂತ ಹಂತವಾಗಿ ಮೊಟಕುಗೊಳಿಸುವ ಕೇಂದ್ರ ಸರ್ಕಾರದ ಉದ್ದೇಶದ ವಿರುದ್ಧ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ರಾಜಕೀಯ ನೋಡದೆ ಪಕ್ಷಾತೀತವಾಗಿ ಖಂಡನ ನಿರ್ಣಯ ಕೈಗೊಳ್ಳಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಆಗ್ರಹಿಸಿದ್ದಾರೆ. ಅವಧಿ ಮುಗಿದ ಗ್ರಾಮ ಪಂಚಾಯತಿಗಳಿದ್ದಲ್ಲಿ ವಿಶೇಷ ಸಭೆ ಕರೆದು ಆದರೂ ಈ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯು.ಪಿ.ಎ ಸರ್ಕಾರ ಜಾರಿಗೆ ತಂದ ಮನರೇಗಾ ಕಾನೂನು ಬಡಜನರಿಗೆ ಉದ್ಯೋಗ ಭದ್ರತೆ ನೀಡಿದಷ್ಟೇ ಅಲ್ಲದೆ, ಗ್ರಾಮ ಪಂಚಾಯತಿಗಳಿಗೆ ದೊಡ್ಡ ಆರ್ಥಿಕ ಸಂಪನ್ಮೂಲವಾಗಿ ಪರಿಣಮಿಸಿತ್ತು. ಗ್ರಾಮೀಣ ಅಭಿವೃದ್ಧಿ, ಆಸ್ತಿ ನಿರ್ಮಾಣ ಹಾಗೂ ಆಡಳಿತಾತ್ಮಕ ಕಾರ್ಯಗಳಿಗೆ ಈ ಯೋಜನೆ ಪ್ರಮುಖ ಆಧಾರವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಪನ್ಮೂಲ ಕೊರತೆಯಿಂದಾಗಿ ಪಂಚಾಯತಿಗಳು ಕನಿಷ್ಠ ಕೆಲಸಗಳನ್ನೂ ನಿರ್ವಹಿಸಲಾಗದ ಸ್ಥಿತಿಗೆ ತಲುಪಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
15ನೇ ಹಣಕಾಸು ಆಯೋಗದ ಅನುದಾನ ಇನ್ನೂ ಬಿಡುಗಡೆಯಾಗದಿರುವುದರಿಂದ ಸ್ವಂತ ನಿಧಿ ಸಂಪನ್ಮೂಲವಿಲ್ಲದ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರನ್ನು ಎದುರಿಸಲು ಸಾಧ್ಯವಾಗದೆ ತರೆಮರೆಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದೆ ಪಂಚಾಯತಿಗಳು ಅಸಹಾಯಕ ಸ್ಥಿತಿಗೆ ತಳ್ಳಲ್ಪಟ್ಟಿವೆ.ಯು.ಪಿ.ಎ ಸರಕಾರದ ಅವದಿಯ ಸೋನಿಯಾ ಗಾಂದಿಯ ಮಾರ್ಗದರ್ಶನದಲ್ಲಿ ಮನಮೋಹನ ಸಿಂಗ್ ರವರು ಮನರೇಗಾ ಯೋಜನೆಯನ್ನು ಜಾರಿಗೆ ತಂದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅದ್ಯಕ್ಷನಾಗಿದ್ದ ಸ್ವತಃ ನನ್ನ ಅನುಭವದಲ್ಲಿ ಗ್ರಾಮದ ಕೃಷಿ,ಹೈನುಗಾರಿಕೆ,ಶಿಕ್ಷಣ,ರಸ್ತೆ,ತಡೆಗೋಡೆ,ಅಂತರ್ಜಲ ವೃದ್ದಿ,ಸ್ವಚ್ಚತೆ ಇತ್ಯಾದಿ ಗ್ರಾಮೀಣಾ ಸರ್ವಾಂಗೀಣ ಅಭಿವೃದ್ದಿಯನ್ನು ಕೈಗೊಂಡು ಸತತ ಮೂರು ವರ್ಷ ಒಂದರಿಂದ ಒಂದೂವರೆ ಕೋಟಿಯವರೆಗೆ ಆರ್ಥಿಕ ವೆಚ್ಚವನ್ನು ಭರಿಸಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದ ಹಗ್ಗಳಿಕೆ ನಮ್ಮ ಗ್ರಾಮ ಪಂಚಾಯತಿಗೆ ಒದಗಿರುವುದು ಅಲ್ಲದೆ ಜನಸ್ನೇಹಿ ಆಡಳಿತ ನೀಡಲು ಸಹಾಕಾರಿಯಾಗಿರುವುದು ಮನರೇಗಾ ಯೋಜನೆ ಎಂದು ದೈರ್ಯದಿಂದ ಹೇಳಬಲ್ಲೆ ಶ್ರೀ.ಶೆಟ್ಟಿ ಹೇಳಿದ್ದಾರೆ.
ಇಂತಹ ಸಂಕಷ್ಟಕರ ಸಂದರ್ಭದಲ್ಲಿ ಮನರೇಗಾ ಯೋಜನೆಯ ಯು.ಪಿ.ಎ ಕಾಲದ ನಿಯಮಗಳನ್ನು ತೆಗೆದುಹಾಕಿ, ರಾಜ್ಯ–ಕೇಂದ್ರ ಪಾಲನ್ನು 60:40 ರೂಪದಲ್ಲಿ ವಿಧಿಸಿರುವುದು ಕೇಂದ್ರ ಸರ್ಕಾರದ ತಪ್ಪು ನಿರ್ಧಾರವಾಗಿದ್ದು, ಯಾವುದೇ ರಾಜ್ಯ ಸರ್ಕಾರಕ್ಕೆ ಇದನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಇದು ಯೋಜನೆಯನ್ನು ಪರೋಕ್ಷವಾಗಿ ಸ್ಥಗಿತಗೊಳಿಸುವ ತಂತ್ರವಾಗಿದ್ದು, ಇದರಿಂದ ಗ್ರಾಮ ಪಂಚಾಯತಿಗಳ ಅಸ್ತಿತ್ವಕ್ಕೇ ಅಪಾಯ ಎದುರಾಗಲಿದೆ ಎಂದು ಅವರು ಎಚ್ಚರಿಸಿದರು.
ರಾಜಕೀಯ ಭೇದಭಾವವಿಲ್ಲದೆ ಗ್ರಾಮ ಸರಕಾರವೆಂದೇ ಕರಯಲ್ಪಟ್ಟ ಗ್ರಾಮ ಪಂಚಾಯತಿಗಳ ಅಸ್ತಿತ್ವ ಉಳಿಸಿಕೊಳ್ಳುವ ಜೊತೆಗೆ ಭವಿಷ್ಯದಲ್ಲಿ ಚುನಾಯಿತ ಯಾವುದೇ ಜನಪ್ರತಿನಿದಿಗಳು ಆಡಳಿತ ನಡೆಸುವಾಗ ಜನರ ಆಶೋತ್ತರಗಳನ್ನು ಈಡೇರಿಸಬೇಕಾದಲ್ಲಿ ಈಗಲೇ ಎಚ್ಚರಗೊಂಡು ಜನಾಂದೋಲನ ರೀತಿಯಲ್ಲಿ ಇದರ ವಿರುದ್ದ ಸೆಟೆದು ನಿಲ್ಲಬೇಕಾದ ಅನಿವಾರ್ಯತೆಇದೆ. ಗ್ರಾಮ ಸ್ವರಾಜ್ ಹಿತಾಸಕ್ತಿಯನ್ನು ಕಾಪಾಡಬೇಕಾದರೆ ಮನರೇಗಾ ಯೋಜನೆಯೇ ಏಕೈಕ ಪರಿಹಾರ. ಯೋಜನೆಯ ಹೆಸರನ್ನು ಬದಲಾಯಿಸುವ ಕೇಂದ್ರದ ಚಿಂತನೆ ಮಹಾತ್ಮಾ ಗಾಂಧೀಜಿಯವರಿಗೆ ಮಾಡಿದ ಅವಮಾನವಾಗಿದ್ದು, ಗ್ರಾಮ ಸ್ವರಾಜ್ಯದ ಆಶಯಗಳನ್ನೇ ಹಾಳುಗೆಡವುವ ಕ್ರಮವಾಗಿದೆ ಎಂದು ಕುಳಾಲು ಸುಭಾಶ್ಚಂದ್ರ ಶೆಟ್ಟಿ ಖಂಡಿಸಿದ್ದಾರೆ