ಮಂಗಳೂರು: ಏ.19ರಂದು ಇಸ್ಕಾನ್ ವತಿಯಿಂದ ರಥಯಾತ್ರೆ, ಅಕ್ಷಯ ತೃತೀಯ ಮಹೋತ್ಸವ

ಮಂಗಳೂರಿನ ಪಿವಿಎಸ್ ಕಲಾಕುಂಜದಲ್ಲಿರುವ ಶ್ರೀ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ಏಪ್ರಿಲ್ 19ರಂದು ರಥಯಾತ್ರೆ ಹಾಗೂ ಅಕ್ಷಯ ತೃತೀಯ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ ಎಂದು ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಾಕಾರ ರಾಮದಾಸ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥಯಾತ್ರೆ ಮತ್ತು ಅಕ್ಷಯ ತೃತೀಯ ಎರಡೂ ಹಿಂದೂ ಧರ್ಮದಲ್ಲಿ ಅತ್ಯಂತ ಶುಭ ದಿನಗಳಾಗಿದ್ದು, ಈ ದಿನಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಮತ್ತು ಹೊಸ ಆರಂಭಗಳು ಅತ್ಯಂತ ಫಲಪ್ರದವಾಗುತ್ತವೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಕಾರ್ಯಕ್ರಮವು ಬೆಳಿಗ್ಗೆ 7.15ಕ್ಕೆ ವಿಶೇಷ ಶೃಂಗಾರ ಆರತಿ ಮತ್ತು ಭಕ್ತಿಮಯ ಕೀರ್ತನೆಗಳೊಂದಿಗೆ ಆರಂಭವಾಗಲಿದೆ. ಬಳಿಕ ಬೆಳಿಗ್ಗೆ 8.00ಕ್ಕೆ ಉಪನ್ಯಾಸ ಹಾಗೂ 9.00ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 5.00ಕ್ಕೆ ಮಹಾಲಕ್ಷ್ಮೀ ಹೋಮ, 6.00ಕ್ಕೆ ವೇದಿಕೆ ಕಾರ್ಯಕ್ರಮ, 7.00ಕ್ಕೆ ಭವ್ಯ ರಥಯಾತ್ರೆ ಮತ್ತು ರಾತ್ರಿ 8.15ಕ್ಕೆ ಶಯನ ಆರತಿ ನೆರವೇರಲಿದೆ. ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.

ರಥಯಾತ್ರೆಯ ವೇಳೆ ಶ್ರೀ ಶ್ರೀ ಕೃಷ್ಣ ಬಲರಾಮ ದೇವರನ್ನು ಅಲಂಕರಿಸಿದ ರಥದಲ್ಲಿ ಭಕ್ತರೊಂದಿಗೆ ಸಂಕೀರ್ತನೆ ಹಾಗೂ ನೃತ್ಯಗಳ ನಡುವೆ ನಗರ ಪ್ರದಕ್ಷಿಣೆ ನಡೆಸಲಾಗುತ್ತದೆ. ಪಿವಿಎಸ್ ಕಲಾಕುಂಜ್‌ನಿಂದ ಆರಂಭವಾಗುವ ಮೆರವಣಿಗೆ ಬೆಸಂಟ್ ಕಾಲೇಜು, ಕೆನರಾ ಕಾಲೇಜು (ಜೈಲು ರಸ್ತೆ), ಎಂಪೈರ್ ಮಾಲ್, ಕೊಡಿಯಾಲ್ಗುತ್ತು, ಕ್ಯಾಪುಚಿನ್ ಚರ್ಚ್ ರಸ್ತೆ, ಎಂ.ಜಿ. ರಸ್ತೆ ಮಾರ್ಗವಾಗಿ ಮತ್ತೆ ಪಿವಿಎಸ್ ಕಲಾಕುಂಜ್‌ಗೆ ತಲುಪಲಿದೆ.

ಸುದ್ದಿಗೋಷ್ಠಿಯಲ್ಲಿ ಇಸ್ಕಾನ್ ಮಂಗಳೂರು ಉಪಾಧ್ಯಕ್ಷ ನಂದನ ದಾಸ ಹಾಗೂ ಸಂಯೋಜಕ ಸುಂದರ ಗೌರ ದಾಸ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!