ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-2: ಕಾಂಗ್ರೆಸ್ ವಿರುದ್ಧ ಕಾಮತ್ ವಾಗ್ದಾಳಿ

“ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳುವ ಕಾಂಗ್ರೆಸ್ ನಾಯಕರು, ಮೊದಲು ತಾವೇ ಅದನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು” ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದ ಅನುದಾನಗಳು ಹಾಗೂ ಇಂದಿನ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಅವಧಿಯಲ್ಲಿ ಬಂದ ಅನುದಾನಗಳ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಇದರಿಂದ ಯಾರು ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಜನತೆಗೆ ಸ್ಪಷ್ಟವಾಗಲಿದೆ ಎಂದರು.

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-2 ಅಡಿಯಲ್ಲಿ 165 ಕೋಟಿ ರೂ. ಕಾಮಗಾರಿ ಕುರಿತು ಕಾಂಗ್ರೆಸ್ ನಾಯಕರು ಕೇಳಿರುವ ಪ್ರಶ್ನೆಗೆ, ಅದರ ಉತ್ತರ ಅವರಿಗೆ ಗೊತ್ತಿದ್ದರೂ ಜನರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ಯೋಜನೆ ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದು, ಅದರ ದಾಖಲೆಗಳನ್ನೂ ಅವರು ಪ್ರದರ್ಶಿಸಿದರು.

ಕಾಂಗ್ರೆಸ್ ಸರ್ಕಾರ ಮಹಾನಗರ ಪಾಲಿಕೆಗಳಿಗೆ ಬಿಡುಗಡೆಯಾದ ಅನುದಾನಗಳಿಗೆ ತಡೆ ನೀಡಿದ್ದು, ಇದೀಗ ಅದೇ ಯೋಜನೆಗೆ ‘2’ ಎಂಬ ಹೆಸರನ್ನು ಸೇರಿಸಿ ತಮ್ಮ ಸಾಧನೆ ಎಂದು ಪ್ರಚಾರ ಮಾಡುತ್ತಿದೆ. ಹೆಸರು ಮಾತ್ರ ಬದಲಾವಣೆ, ಅನುದಾನ ಮತ್ತು ಯೋಜನೆ ಅದೇ ಆಗಿದೆ ಎಂದು ವ್ಯಂಗ್ಯವಾಡಿದರು.

ಹಿಂದಿನ ಯೋಜನೆಗೆ ತಡೆ ನೀಡಿದ್ದು ಯಾಕೆ? ಈಗ ಅದೇ ಯೋಜನೆಗೆ ಹೊಸ ಹೆಸರು ಯಾಕೆ? ಎಂದು ಪ್ರಶ್ನೆಗಳ ಸುರಿಮಳೆಗೈದ ಕಾಮತ್, ಹಣಕಾಸು ಇಲಾಖೆಯ ಅನುಮತಿ ಇಲ್ಲದೇ ಶಿಲಾನ್ಯಾಸ ನಡೆದಿದೆ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿ, ಬಜೆಟ್‌ನಲ್ಲಿ ಘೋಷಣೆ ಆಗಲು ಹಣಕಾಸು ಇಲಾಖೆಯ ಅನುಮತಿ ಅವಶ್ಯಕ ಎಂಬ ಮೂಲಭೂತ ಅರಿವು ಇರಬೇಕೆಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಹಾಗೂ ಬಿಜೆಪಿ-ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ನೀಡಿದ್ದೇವೆ ಎನ್ನುವ ಸರ್ಕಾರ, ಅದರಡಿ ಒಂದಾದರೂ ಕಾಮಗಾರಿಗೆ ಶಂಕುಸ್ಥಾಪನೆ ಅಥವಾ ಟೆಂಡರ್ ನೀಡಿದ ದಾಖಲೆ ತೋರಿಸಲಿ ಎಂದು ಸವಾಲು ಹಾಕಿದರು. ರಾಜ್ಯದ 224 ಕ್ಷೇತ್ರಗಳಿಗೆ ನೀಡಬೇಕಾದ ಸಾಮಾನ್ಯ ಅನುದಾನವನ್ನು ದೊಡ್ಡ ಸಾಧನೆ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದರು.

ವಿಶೇಷ ಯೋಜನೆಗಾಗಿ ಪಕ್ಷಭೇದ ಮರೆತು ಸರ್ಕಾರಕ್ಕೆ ಬೇಡಿಕೆ ಸಲ್ಲಿಸೋಣ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಾವು ಸಹಮತ ವ್ಯಕ್ತಪಡಿಸಿದರೂ, ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯಿಗೂ, ಕರಾವಳಿಗೂ ಯಾವುದೇ ವಿಶೇಷ ಅನುದಾನ ದೊರಕಿಲ್ಲ ಎಂದು ಹೇಳಿದರು. ಸರ್ಕಾರವೇ ತಮ್ಮ ನಾಯಕರ ಮಾತಿಗೆ ಬೆಲೆ ನೀಡದಿರುವಾಗ, ನಮ್ಮ ಬೇಡಿಕೆಗಳಿಗೆ ಸ್ಪಂದಿಸುವುದೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ದಿನದಲ್ಲಿ 70ಕ್ಕೂ ಹೆಚ್ಚು ಗುದ್ದಲಿ ಪೂಜೆಗಳು ನಡೆದಿರುವ ದಾಖಲೆ ಇದ್ದು, ಈಗಿನ ಸರ್ಕಾರದಲ್ಲಿ ಒಂದು ಗುದ್ದಲಿ ಪೂಜೆ ಕೂಡ ಕಷ್ಟವಾಗುತ್ತಿದೆ ಎಂದು ಟೀಕಿಸಿದರು. ಈಗ ನಡೆಯುತ್ತಿರುವ ಕೆಲ ಕಾಮಗಾರಿಗಳು ಹಿಂದಿನ ಸರ್ಕಾರ ಮಂಜೂರು ಮಾಡಿದ ಅನುದಾನದ ಫಲ ಎಂದು ಹೇಳಿದರು.

ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿಯನ್ನು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಹೇಳುವುದು ಹಾಸ್ಯಾಸ್ಪದ. ಇದು ಪ್ರತೀ ವರ್ಷವೂ ಮಹಾನಗರ ಪಾಲಿಕೆಯ ಅನುದಾನದಿಂದ ನಡೆಯುವ ಸಾಮಾನ್ಯ ಕಾರ್ಯವಾಗಿದೆ. ಅದನ್ನೂ ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ಮಳೆ ಹಾನಿ ಪರಿಹಾರ ಕುರಿತು ಮಾತನಾಡಿದ ಅವರು, ಇದು ಹಿಂದೆಯೂ ಇದ್ದ ಯೋಜನೆ, ಈಗಲೂ ಇದೆ. ಸ್ಥಳೀಯ ಶಾಸಕರ ಭಾಗವಹಿಸುವಿಕೆಯಲ್ಲಿ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ ಬಳಿಕ ಪರಿಹಾರ ಮಂಜೂರಾಗುತ್ತದೆ. ಅದನ್ನೂ ಸರ್ಕಾರದ ವಿಶೇಷ ಸಾಧನೆ ಎಂದು ಬಿಂಬಿಸುವುದು ತಪ್ಪು ಎಂದರು.

ನಗರದಲ್ಲಿ ನಡೆಯುತ್ತಿರುವ ಅಮೃತ ಯೋಜನೆ, ಜಲಸಿರಿ ಹಾಗೂ ಒಳಚರಂಡಿ ಕಾಮಗಾರಿಗಳು ಕೇಂದ್ರ ಸರ್ಕಾರದ ಯೋಜನೆಗಳಾಗಿದ್ದು, ಅವುಗಳಿಗೆ ಅನುದಾನ ನೀಡಿರುವುದು ಸಹ ಕೇಂದ್ರ ಸರ್ಕಾರವೇ. ರಾಜ್ಯ ಸರ್ಕಾರವು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯುದ್ದಕ್ಕೂ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕಾಮತ್, ಹಲವು ದಾಖಲೆಗಳನ್ನು ಪ್ರದರ್ಶಿಸಿ ತಮ್ಮ ವಾದವನ್ನು ಸಮರ್ಥಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳು ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!