ಬಂಗ್ರಮಂಜೇಶ್ವರದಲ್ಲಿ ‘ವಿಶ್ವ ರೂಪಂ’ ಯುವಜನೋತ್ಸವದ ಮಹಾಸಮಾರೋಪ

ಬಂಗ್ರಮಂಜೇಶ್ವರ: ಇಲ್ಲಿನ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ, ಓಜ ಸಾಹಿತ್ಯ ಕೂಟದ ನೇತೃತ್ವದಲ್ಲಿ ಕಳೆದ 12 ವಾರಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬ “ವಿಶ್ವ ರೂಪಂ’ ಯುವಜನ ಓಜಸ್ವರೂಪಂ – ಸೀಸನ್ 2.0 (2025-26) ರ ಸಂಭ್ರಮದ ಸಮಾರೋಪ ಸಮಾರಂಭವು ಇದೇ ಬರುವ ಫೆಬ್ರವರಿ 1, 2026ರಂದು ಜರುಗಲಿದೆ.


ಈ ಭವ್ಯ ಸಮಾರೋಪ ಸಮಾರಂಭವು ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನದೊಂದಿಗೆ ಸಂಪನ್ನಗೊಳ್ಳಲಿದೆ. ಪೂಜ್ಯ ಶ್ರೀಗಳ ಸಾನ್ನಿಧ್ಯವು ಕಾರ್ಯಕ್ರಮಕ್ಕೆ ವಿಶೇಷ ಆಧ್ಯಾತ್ಮಿಕ ಮೆರುಗು ನೀಡಲಿದ್ದು, ಸಮುದಾಯದ ನೂರಾರು ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.


ಕಳೆದ ನವೆಂಬ‌ರ್ 9ರಿಂದ ಆರಂಭಗೊಂಡ ಈ ಮಹೋತ್ಸವವು ಸತತ 12 ವಾರಗಳ ಕಾಲ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಎಂಟು ವಲಯಗಳ ವಿಶ್ವಬ್ರಾಹ್ಮಣ ಸಮುದಾಯದ ಯುವ ಪ್ರತಿಭೆಗಳಿಗೆ ಬೃಹತ್ ವೇದಿಕೆ ಕಲ್ಪಿಸಿಕೊಟ್ಟಿತ್ತು. ಭಜನೆ, ಚಿತ್ರಕಲೆ, ಮಣ್ಣಿನ ಶಿಲ್ಪ ರಚನೆ, ಕಬಡ್ಡಿ, ಕ್ರಿಕೆಟ್, ಯೋಗಾಸನ, ಯಕ್ಷಗಾನ ನೃತ್ಯ ಹಾಗೂ ಶಾಸ್ತ್ರೀಯ ಸಂಗೀತ ಸೇರಿದಂತೆ ಒಟ್ಟು 50 ವಿವಿಧ ಕಲಾ ಮತ್ತು ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಯುವಜನತೆಯನ್ನು ಸಂಘಟಿಸುವಲ್ಲಿ ಈ ಯೋಜನೆಯು ಫೆಬ್ರವರಿ 1ರಂದು ಕ್ಷೇತ್ರದ ಸಭಾ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭೆಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ ಹಾಗೂ ಪ್ರತಿಷ್ಠಿತ ಬಿರುದು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಗಣ್ಯರ ಸಮ್ಮುಖದಲ್ಲಿ ನೆರವೇರಲಿವೆ.


ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಯುವ ಮನಸ್ಸುಗಳನ್ನು ಪ್ರೋತ್ಸಾಹಿಸುವ ಈ ಪವಿತ್ರ ಕಾರ್ಯಕ್ರಮಕ್ಕೆ ಸಮಾಜಭಾಂದವರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಓಜ ಸಾಹಿತ್ಯ ಕೂಟದ ಅಧ್ಯಕ್ಷರಾದ ಬಿ.ಎಂ. ಮೋಹನ್ ಚಂದ್ರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಸೋಮನಾಥ ಆಚಾರ್ಯ ಮತ್ತು ಕೋಶಾಧಿಕಾರಿ ರಾಘವೇಂದ್ರ ಪ್ರಸಾದ್ ಆಚಾರ್ಯ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!