ಮಂಜೇಶ್ವರ: ಮೀಂಜ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯೆ ಸುಂದರಿ ಶೆಟ್ಟಿ ಅವರು ಆರ್‌ಎಸ್‌ಎಸ್ ನೇತೃತ್ವದ ‘ಹಿಂದೂ ಸಮಾಜೋತ್ಸವ’ದಲ್ಲಿ ಪಾಲ್ಗೊಂಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸೈದ್ಧಾಂತಿಕವಾಗಿ ಸಂಘ ಪರಿವಾರವನ್ನು ವಿರೋಧಿಸುವ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕಿಯೇ ಇಂತಹ ಸಮಾವೇಶದಲ್ಲಿ ಕಾಣಿಸಿಕೊಂಡಿರುವುದು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ಮೀಂಜದಲ್ಲಿ ನಡೆದ ಏಕತಾ ಸಮ್ಮೇಳನದಲ್ಲಿ ಸುಂದರಿ ಶೆಟ್ಟಿ ಅವರು ಭಾರತಾಂಬೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದಲ್ಲದೆ, ವೇದಿಕೆಯಲ್ಲಿ ಭಾಷಣವನ್ನೂ ಮಾಡಿದ್ದರು. ಸಂಘದ ಶತಮಾನೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಪಿಐ ಜಿಲ್ಲಾ ಘಟಕ, ಕೂಡಲೇ ಸ್ಪಷ್ಟನೆ ನೀಡುವಂತೆ ಅವರಿಗೆ ನೋಟಿಸ್ ಜ್ಯಾರಿ ಮಾಡಿದೆ.
ಶಿಸ್ತು ಉಲ್ಲಂಘನೆಯ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಗಳಿದ್ದು, ಈ ಘಟನೆ ಕಾಸರಗೋಡು ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.