ಮಂಜೇಶ್ವರ: ಕಳಪೆ ಕಾಮಗಾರಿ: ಬೇಜವಾಬ್ದಾರಿ ನೀರು ಸರಬರಾಜು ಇಲಾಖೆ: ತೋಡಿದ ಗುಂಡಿಗಳಿಂದ ಸರಣಿ ಅಪಘಾತ, ಸಾರ್ವಜನಿಕರ ಆಕ್ರೋಶ

​ಮಂಜೇಶ್ವರ: ಕೇರಳ ನೀರು ಸರಬರಾಜು ಇಲಾಖೆಯ ವತಿಯಿಂದ ಪೈಪ್ ಅಳವಡಿಸುವ ಹೆಸರಿನಲ್ಲಿ ರಸ್ತೆ ಬದಿಗಳಲ್ಲಿ ಗುಂಡಿಗಳನ್ನು ತೋಡಿ, ಕೆಲಸ ಮುಗಿದ ಬಳಿಕ ಅವುಗಳನ್ನು ಮುಚ್ಚದೆ ಹಾಗೇ ಬಿಟ್ಟುಹೋಗುತ್ತಿರುವ ಬೇಜವಾಬ್ದಾರಿ ಧೋರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ಸ್ಥಳದಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಪ್ರಾಣಭಯದಲ್ಲಿ ಓಡಾಡುವಂತಾಗಿದೆ.

​ಇತ್ತೀಚೆಗೆ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 9ನೇ ವಾರ್ಡ್‌ನ ಚೌಕಿ ಉದ್ಯಾವರದಲ್ಲಿ ಬಸ್ ನಿಲ್ದಾಣದ ಪಕ್ಕದಲ್ಲೇ ಪೈಪ್ ಅಳವಡಿಸಲು ಭಾರಿ ಗುಂಡಿಗಳನ್ನು ತೋಡಲಾಗಿತ್ತು. ಆದರೆ, ಕಾಮಗಾರಿ ಮುಗಿದರೂ ಈ ಗುಂಡಿಗಳನ್ನು ಇದುವರೆಗೂ ಸರಿಯಾಗಿ ಮುಚ್ಚಿಲ್ಲ.

ಪರಿಣಾಮವಾಗಿ ಇಲ್ಲಿ ಈಗಾಗಲೇ ಎರಡು ಅಪಘಾತಗಳು ಸಂಭವಿಸಿದ್ದು, ಒಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

​ಕೇವಲ ಚೌಕಿ ಉದ್ಯಾವರ ಮಾತ್ರವಲ್ಲದೆ, ಇದಕ್ಕೆ ಸಮೀಪದ ಪಾವೂರು ಪ್ರದೇಶದಲ್ಲೂ ಇದೇ ರೀತಿಯ ದುಸ್ಥಿತಿ ಇದೆ. ಪೈಪ್‌ಲೈನ್ ಕಾಮಗಾರಿಯ ಹೆಸರಿನಲ್ಲಿ ತೋಡಿದ ಹೊಂಡಗಳನ್ನು ಮುಚ್ಚದೆ ಸಂಬಂಧಪಟ್ಟ ಇಲಾಖೆ ಹಾಗೆಯೇ ಬಿಟ್ಟು ತೆರಳಿದೆ ಎಂದು ಸಾರ್ವಜನಿಕರು ತೀವ್ರವಾಗಿ ದೂರಿದ್ದಾರೆ.

​ನೀರು ಸರಬರಾಜು ಇಲಾಖೆಯ ಈ ಬೇಜವಾಬ್ದಾರಿ ವರ್ತನೆಯಿಂದಾಗಿ ದಿನನಿತ್ಯ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಪ್ರಾಣಾಪಾಯದ ಸುಳಿಗೆ ಸಿಲುಕುತ್ತಿದ್ದಾರೆ. ರಾತ್ರಿ ವೇಳೆ ಸಂಚರಿಸುವವರಿಗೆ ಈ ತೆರೆದ ಗುಂಡಿಗಳು ಕಣ್ಣಿಗೆ ಕಾಣದೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವುದಾಗಿ ಸ್ಥಳೀಯರು ತಮ್ಮ ಆಕ್ರೋಶ ಪಕ್ತಪಡಿಸುತಿದ್ದಾರೆ.

​ಇನ್ನು ಹೆಚ್ಚಿನ ಜೀವಹಾನಿ ಸಂಭವಿಸುವುದಕ್ಕಿಂತ ಮುಂಚಿತವಾಗಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ತೆರೆದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!