ಕಾಸರಗೋಡು : ಜಿಲ್ಲೆಯಲ್ಲಿ ವಿವಿಧ ಸಾಂಕ್ರಾಮಿಕ ಜ್ವರಗಳು ತೀವ್ರವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಎಚ್1ಎನ್1 ಸೋಂಕಿನಿಂದ ಅಜಾನೂರಿನ ಯಶೋಧ ಹಾಗೂ ಹಳದಿ ಕಾಮಾಲೆಯಿಂದ ನೀರ್ಚಾಲಿನ ಹೇಮಚಂದ್ರ (36) ಸಾವನ್ನಪ್ಪಿದ್ದಾರೆ.

ಮೃತರ ಸಂಪರ್ಕದಲ್ಲಿದ್ದವರ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ. ಇದರ ಜೊತೆಗೆ, ಅಂಬಲತ್ತರ ಪ್ರದೇಶದ 18 ವರ್ಷದ ಯುವಕನಿಗೆ ಅಮೀಬಿಕ್ ಮೆದುಳುಜ್ವರ ದೃಢಪಟ್ಟಿದ್ದು, ಆತನ ಸ್ಥಿತಿ ಅತಿ ಗಂಭೀರವಾಗಿದೆ.
ಸ್ಥಳೀಯ ಕೆರೆಯಲ್ಲಿ ಸ್ನಾನ ಮಾಡಿದ್ದರಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಆ ಕೆರೆಯಲ್ಲಿಯೂ ಸ್ನಾನ ಮಾಡದಂತೆ ಮತ್ತು ಅದರಲ್ಲಿ ಮಿಂದವರು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಒಳಪಡುವಂತೆ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಈ ವರ್ಷ ಈಗಾಗಲೇ 155 ಜನರಿಗೆ ಅಮೀಬಿಕ್ ಮೆದುಳುಜ್ವರ ಸೋಂಕು ಕಾಣಿಸಿಕೊಂಡಿದ್ದು, 41 ಮಂದಿ ಜೀವ ಕಳೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

