ಬೆಳ್ಳೂರು: ಇಲ್ಲಿನ ಕಲ್ಲಗ ಪಡ್ಡಾಯಿ ಮೂಲೆ ತಿರುವು ಪದೇ ಪದೇ ವಾಹನ ಅಫಘಾತದ ಅಸುರಕ್ಷಿತ ಪ್ರದೇಶವಾಗಿ ಬದಲಾಗಿದೆ. ನಿನ್ನೆ ಕಾರೊಂದು ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದು ದುರ್ಘಟನೆ ನಡೆದ ಇದೇ ಸ್ಥಳದಲ್ಲಿ ಎರಡುಸತಿಂಗಳ ಹಿಂದೆಯೂ ಕಾರೊಂದು ಮಗುಚಿತ್ತು. ಎರಡೂ ಘಟನೆಗಳಲ್ಲಿ ಜೀವಾಪಾಯ ಸಂಭವಿಸದೇ ಇದ್ದರೂ ಈ ಪ್ರದೇಶ ಅಪಘಾತ ವಲಯವಾಗಿ ಬದಲಾಗಿದೆ ಎಂದು ನಾಗರಿಕರು ಆತಂಕ ಪ್ರಕಟಿಸಿದ್ದಾರೆ.
ನಿನ್ನೆ ಅಪರಾಹ್ನ ಕರ್ನಾಟಕ ಭಾಗಕ್ಕೆ ಅಡಿಕೆ ಹೇರಿ ಕೊಂಡೊಯ್ಯುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿ ಬೆಳ್ಳೂರು ಪಡ್ಡಾಯಿಮೂಲೆಯ ಗೂಡಂಗಡಿ ನಡೆಸುವ ಸುರೇಶ್ ರ ಪುತ್ರ ಕೆ. ಸುನಿಲ್ ಕುಮಾರ್ (33) ಹಾಗೂ ಕಾರು ಚಾಲಕ ಏತಡ್ಕದ ಕರೋಳ್ತಡ್ಕ ನಿವಾಸಿ ಅಶ್ರಫ್ ಎಂಬಿವರು ಗಾಯಗೊಂಡಿದ್ದಾರೆ. ಗಾಯಾಳುಗಳು ಮುಳ್ಳೇರಿಯ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಪೖಕಿ ಸುನಿಲ್ ಅವರ ಎಡ ಕೖ ಮತ್ತು ಬಲದ ಕಾಲು ಒಡೆದು ಗಾಯವಾಗಿದೆ. ಮನೆಯೊಳಗೆ ಮಲಗಿ ನಿದ್ರಿಸುವಾಗ ಕಾರು ಮೇಲ್ಛಾವಣಿಗೆ ಬಿದ್ದ ರಭಸಕ್ಕೆ ಮೇಲಿಂದ ಕಲ್ಲು ಮತ್ತು ಮರದ ತುಂಡುಗಳು ದೇಹಕ್ಕೆ ಬಿದ್ದು ಇವರಿಗೆ ಗಾಯ ಸಂಭವಿಸಿತು. ಘಟನೆ ನಡೆಯುವ ಸಂದರ್ಭ ಮನೆಯಲ್ಲಿ ಸುನಿಲ್ ನ ಸಹೋದರಿ ಸುಲೋಚನ, ಚಿಕ್ಕಮ್ಮನ ಮಗ ನಾರಂಪಾಡಿಯ ಅಶ್ವತ್ಥ್ ರಾಜ್ ಎಂಬವರಿದ್ದು, ಶಬ್ದ ಕೇಳಿ ಹೊರಗೋಡಿದ್ದರಿಂದ ಅಪಾಯಗಳೇನೂ ಸಂಭವಿಸಲಿಲ್ಲ. ಉನ್ನತಿ (ಕಾಲನಿ) ಯ ಮಾಡಿಲ್ಲದ ಶೀಟು ಹಾಸಿದ್ದ ಮನೆ ಇದಾಗಿದೆ. ಕಾರು ಮಗುಚಿದ ಪರಿಣಾಮ ಮನೆ ಬಹುತೇಕ ಕುಸಿದು ಹೋಗಿದೆ.