ಮಂಗಳೂರು: ರಾಜ್ಯ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಶುಕ್ರವಾರ ಪರ್ಜನ್ಯ ಜಪ ಹಾಗೂ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.

ಸಂಭಾವ್ಯ ಬರ ಪರಿಸ್ಥಿತಿ ನಿವಾರಣೆ, ಸಮರ್ಪಕ ಮಳೆ ಹಾಗೂ ನೀರಿನ ಕೊರತೆ ನೀಗಿಸುವಂತೆ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕದ್ರಿ ದೇವಾಲಯದ ಗೋಮುಖ ತೀರ್ಥದಲ್ಲಿ ವೇದ ಪಾರಾಯಣದೊಂದಿಗೆ ಪರ್ಜನ್ಯ ಜಪ ನಡೆಯಿತು.

ಈ ಕುರಿತು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಕರಾವಳಿಯಲ್ಲಿ ಜೂನ್–ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ ಉತ್ತಮ ಮಳೆಯಾಗುವ ವೇಳೆ ಈ ಬಾರಿ ಮಳೆಯ ಕೊರತೆಯಿಂದ ಕೃಷಿ ಹಾಗೂ ಜಲಮೂಲಗಳು ಸಂಕಷ್ಟಕ್ಕೆ ಸಿಲುಕಿವೆ. ಬಾವಿ, ತೋಡು ಹಾಗೂ ಜಲಮೂಲಗಳಲ್ಲಿ ನೀರಿನ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲಿ, ಕೃಷಿ ಸಂಸ್ಕೃತಿ ಮತ್ತು ನೀರಿನ ಸಂಸ್ಕೃತಿ ಉಳಿಯಲಿ ಎಂಬ ಉದ್ದೇಶದಿಂದ ವಿಶೇಷ ಪರ್ಜನ್ಯ ಜಪ ಆಯೋಜಿಸಲಾಗಿದೆ ಎಂದು ತಿಳಿಸಿದರು.


