ಕರ್ನಾಟಕ ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ಸರಕಾರ ಕೖಗೊಂಡಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಷ್ಯಲ್ ಮೀಡಿಯಾ ಬಳಕೆಯ ಡಿಜಿಟಲ್ ಚಟದ ವ್ಯಸನದಿಂದ ಮಕ್ಕಳ ಮಾನಸಿಕಾರೋಗ್ಯ ಮತ್ತು ಸಾಮಾಜಿಕ ಜೀವನದ ಮೇಲೆ ಗಂಭೀರವಾದ ಪರಿಣಾಮಗಳಾಗುತ್ತಿರುವ ವೖದ್ಯಕೀಯ ವರದಿಗಳ. ಆಧಾರದಲ್ಲಿ, ದುಷ್ಪರಿಣಾಮ ತಡೆಗೆ ಈ ಕ್ರಮವನ್ನು ಜ್ಯಾರಿಗೆ ತರಲಾಗುತ್ತದೆಯೆಂದು ಮುಖ್ಯಮಂತ್ರಿಗಳು 2026-27ನೇ ಸಾಲಿನ ಬಜೆಟ್ ಮಂಡನೆ ಸಂದರ್ಭ ಘೋಷಣೆ ಮಾಡಿದರು.
ಸಾಮಾಜಿಕ ಜಾಲತಾಣ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮತ್ತು ಮಕ್ಕಳ ಮೇಲೆ ಅದರಿಂದುಂಟಾಗುವ ದುಷ್ಪರಿಣಾಮ ನಿಯಂತ್ರಣಕ್ಕೆ ಏನು ಮಾಡಬಹುದೆಂದು ಸರಕಾರ ತಜ್ಞರ ಜತೆ ಹಲವು ಸುತ್ತಿನ ಚರ್ಚೆ ನಡೆಸಿತ್ತು. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯದ ಆತಂಕವನ್ನು ಹಲವು ಬಾರಿ ಪ್ರಸ್ತಾಪಿಸಿದ್ದರು. ಮಕ್ಕಳಲ್ಲಿ ಡಿಜಿಟಲ್ ವ್ಯಸನ ಆತಂಕಕಾರಿ ಮಟ್ಟಕ್ಕೆ ತಲುಪಿದೆ ಎಂದವರು ಅಂಕಿ ಅಂಶ ಸಹಿತ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ವಯಸ್ಸಿನ ಆಧಾರದಲ್ಲಿ ನಿರ್ಬಂಧ ಹೇರಿದೆ.
ಈಗಾಗಲೇ ವಿದೇಶದ ಹಲವು ರಾಜ್ಯಗಳಲ್ಲಿ ಇದೇ ಮಾದರಿಯ ನಿರ್ಬಂಧಗಳನ್ನು ಮಕ್ಕಳಿಗೆ ವಿಧಿಸಲಾಗಿದೆ. ಫಿನ ಲ್ಯಾಂಡ್ ನಲ್ಲಿ ಮಕ್ಕಳ ಡಿಜಿಟಲ್ ಬಳಕೆಗೆ ನಿರ್ಬಂಧವಿದೆ. ಬ್ರಿಟನ್ ಈ ವಿಷಯವನ್ನು ಪರಿಗಣಿಸಿದೆ. ಹಲವು ವಿದೇಶ ರಾಷ್ಟ್ರಗಳು ಈ ಮೊದಲೇ ಮಕ್ಕಳ ಸೋಷಿಯಲ್ ಮೀಡಿಯಾ ಚಟಕ್ಕೆ ಅಂಕುಶ ಹೇರಿದೆ. ಈ ಮಾದರಿಗಳನ್ನು ಅಧ್ಯಯನ ಮಾಡಿದ ಕರ್ನಾಟಕ ರಾಜ್ಯದಲ್ಲಿ ಡಿಜಿಟಲ್ ಡಿಟಾಕ್ಸಿಫಿಕೇಶನ್ ಮತ್ತು ಬಿಯಾಂಡ್ ಸ್ಕ್ರೀನ್ ಮೂಲಕ ಮಕ್ಕಳಿಗೆ ಜವಾಬ್ದಾರಿಯುತ ಡಿಜಿಟಲ್ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡಲು ನಿರ್ಧರಿಸಿದೆ.