ಮಂಗಳೂರು: ಉದ್ಯಮಿಗಳು, ವೃತ್ತಿಪರರು ಹಾಗೂ ವ್ಯಾಪಾರಸ್ಥರ ನಡುವೆ ವ್ಯವಹಾರಿಕ ನೆಟ್‌ವರ್ಕ್ ವೃದ್ಧಿಸುವ ಉದ್ದೇಶದಿಂದ ಬಿಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್ (BNI) ಇನ್‌ಸ್ಪೈರ್ ಚಾಪ್ಟರ್ ವತಿಯಿಂದ ‘BNI ಇನ್‌ಸೈಟ್–2026’ ಕಾರ್ಯಕ್ರಮವು ಜುಲೈ 18ರಂದು ಸಂಜೆ 4.30ಕ್ಕೆ ನಗರದ ಅವತಾರ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು BNI ಮಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಎನ್. ಶರ್ಮಾ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ವರ್ಷಗಳ ಹಿಂದೆ ಮಂಗಳೂರಿನಲ್ಲಿ BNI ಕಾರ್ಯಾರಂಭಗೊಂಡಿದ್ದು, ಪ್ರಸ್ತುತ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ 425ಕ್ಕೂ ಹೆಚ್ಚು ಉದ್ಯಮಿಗಳು, ವೃತ್ತಿಪರರು ಹಾಗೂ ವ್ಯಾಪಾರಸ್ಥರು ಸದಸ್ಯರಾಗಿದ್ದಾರೆ. ಪರಸ್ಪರ ಸಹಕಾರ ಮತ್ತು ಪರಿಚಯದ ಮೂಲಕ ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳಲು BNI ಪರಿಣಾಮಕಾರಿ ವೇದಿಕೆಯಾಗಿ ರೂಪುಗೊಂಡಿದೆ ಎಂದರು.

ಮಂಗಳೂರು-ಉಡುಪಿ ವಿಭಾಗದ ಅತಿದೊಡ್ಡ ಚಾಪ್ಟರ್ ಆಗಿರುವ BNI ಇನ್‌ಸ್ಪೈರ್ನಲ್ಲಿ 102 ಸದಸ್ಯರಿದ್ದು, ಕಳೆದ ಎಂಟು ವರ್ಷಗಳಲ್ಲಿ ಸದಸ್ಯರು ಪರಸ್ಪರ ₹310 ಕೋಟಿಗೂ ಅಧಿಕ ಮೌಲ್ಯದ ವ್ಯವಹಾರ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ನೀಡಿದ BNI ಪದಾಧಿಕಾರಿ ಸೌಜನ್ಯ ಹೆಗ್ಡೆ, ಉತ್ಪಾದನೆ ಮತ್ತು ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ, ಮಾಹಿತಿ ತಂತ್ರಜ್ಞಾನ ಹಾಗೂ ವಾಸ್ತುಶಿಲ್ಪ ಮತ್ತು ಪರಿಸರ ಎಂಬ ನಾಲ್ಕು ಪ್ರಮುಖ ವಿಷಯಗಳಡಿ ಪ್ಯಾನೆಲ್ ಚರ್ಚೆಗಳನ್ನು ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳ ಪರಿಣಿತರು ಹಾಗೂ ಯಶಸ್ವಿ ಉದ್ಯಮಿಗಳು ಭಾಗವಹಿಸಿ ತಮ್ಮ ಅನುಭವ, ಸವಾಲುಗಳು ಮತ್ತು ಉದ್ಯಮದ ಅವಕಾಶಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.

ಉತ್ಪಾದನೆ ಮತ್ತು ಕೈಗಾರಿಕೆ ವಿಭಾಗದಲ್ಲಿ ರಂಜಲ್ ರಜನೀಶ್ ನಾಯಕ್, ಮನೋಜ್ ಶ್ರೀವಾಸ್ತವ್ ಹಾಗೂ ರಾಬಿನ್ ಜೋಸ್, ಶಿಕ್ಷಣ ಮತ್ತು ಆರೋಗ್ಯ ವಿಭಾಗದಲ್ಲಿ ಡಾ. ಪ್ರಶಾಂತ್ ಮಾರ್ಲ, ಡಾ. ಗ್ರೀಷ್ಮ ವಿವೇಕ ಆಳ್ವ ಹಾಗೂ ಫಾ. ವಿನ್ಸೆಂಟ್ ರಾಬರ್ಟ್ ಕ್ರಾಸ್ತಾ, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ನಮಿತ್ ಪದ್ಮರಾಜ್, ಕಿರಣ್ ಕರಂಕಿ ಹಾಗೂ ದೀಕ್ಷಿತ್ ರೈ, ವಾಸ್ತುಶಿಲ್ಪ ಮತ್ತು ಪರಿಸರ ವಿಭಾಗದಲ್ಲಿ ಆರ್ಕಿಟೆಕ್ಟ್ ಸುಪ್ರೀತ್ ಆಳ್ವ, ವಿನೋದ್ ಆರ್. ಪಿಂಟೋ ಹಾಗೂ ಆರ್ಕಿಟೆಕ್ಟ್ ಅಪೇಕ್ಷಾ ನಾಯಕ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಭಾರತ ಸರ್ಕಾರದ ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ (MSME Development & Facilitation Office), ಬೆಂಗಳೂರಿನ ನಿರ್ದೇಶಕ ದೇವರಾಜ್ ಕೆ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿವಿಧ ಉದ್ಯಮೋದ್ಯಮ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.

ನೋಂದಾಯಿತ BNI ಇನ್‌ಸ್ಪೈರ್ ಸದಸ್ಯರಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದ್ದು, ಮಂಗಳೂರು ಹಾಗೂ ಸುತ್ತಮುತ್ತಲಿನ ಗಣ್ಯ ಉದ್ಯಮಿಗಳು ಮತ್ತು ವೃತ್ತಿಪರರು ಪಾಲ್ಗೊಳ್ಳಲಿದ್ದಾರೆ. ಉದ್ಯಮ ವೃದ್ಧಿಗೆ ಪೂರಕವಾದ ನೆಟ್‌ವರ್ಕಿಂಗ್ ಮತ್ತು ಜ್ಞಾನ ವಿನಿಮಯಕ್ಕೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ BNI ಪದಾಧಿಕಾರಿಗಳಾದ ವಾಸ್ತುಯೋಜಕ ಚೇತನ್ ಕಾಮತ್ ಹಾಗೂ ಡಾ. ಪ್ರಿಯದರ್ಶಿನಿ ರೈ ಉಪಸ್ಥಿತರಿದ್ದರು.

