ಮಂಜೇಶ್ವರ: ಗಡಿ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಇಲ್ಲಿನ ಪೀಸ್ ಕ್ರಿಯೇಟಿವ್ ಶಾಲೆಯ ವಿದ್ಯಾರ್ಥಿಗಳು ಗುರುವಾರದಂದು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ಮೂಲಕ ವಿಭಿನ್ನ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕ್ಯಾನ್ಸರ್ ಸೇರಿದಂತೆ ವಿವಿಧ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು, ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಕೇವಲ ಭೇಟಿ ನೀಡುವಿಕೆಗೆ ಸೀಮಿತವಾಗದೆ, ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿ ಅವರ ಮೊಗದಲ್ಲಿ ಮಂದಹಾಸ ಮೂಡಿಸುವ ಮೂಲಕ ಈ ಪುಟಾಣಿಗಳು ಸಮಾಜಕ್ಕೆ ಮಾದರಿಯಾದರು.
ಆಸ್ಪತ್ರೆಯ ಶಯ್ಯೆಯಲ್ಲಿ ನೋವಿನಿಂದ ಬಳಲುತ್ತಿದ್ದ ರೋಗಿಗಳಿಗೆ ಮಕ್ಕಳ ಮೃದುವಾದ ಮಾತುಗಳು ಮತ್ತು ಪ್ರೀತಿಯ ನಗು ಸಾಂತ್ವನ ನೀಡಿತು. ಜೀವನದಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗುವ ಸಂಸ್ಕಾರವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಶಾಲೆಯು ಈ ಭೇಟಿಯನ್ನು ಆಯೋಜಿಸಿತ್ತು.
ಪಠ್ಯದ ಜೊತೆಗೆ ಮನುಷ್ಯತ್ವದ ಪಾಠವನ್ನು ಪ್ರಾಯೋಗಿಕವಾಗಿ ಕಲಿತ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕಿರಿಯ ವಯಸ್ಸಿನಲ್ಲೇ ಇಂತಹ ಸೇವಾ ಮನೋಭಾವ ಬೆಳೆಸಿಕೊಂಡ ಪೀಸ್ ಕ್ರಿಯೇಟಿವ್ ಶಾಲೆಯ ಪ್ರಯತ್ನವು ಎಲ್ಲರಿಗೂ ಪ್ರೇರಣೆಯಾಗಿದೆ.