ಮಂಜೇಶ್ವರ: ಕೇರಳ–ಕರ್ನಾಟಕ ಗಡಿ ಭಾಗವಾದ ನಂದಾರಪದವಿನಿಂದ ಆರಂಭವಾಗುವ ಮಲೆನಾಡು ಹೆದ್ದಾರಿಯಲ್ಲಿ ಕಳೆದ ಎರಡು ವರ್ಷಗಳಿಂದ ಬೀದಿ ದೀಪಗಳು ಕಾರ್ಯನಿರ್ವಹಿಸದೇ ಇಡೀ ರಸ್ತೆ ಕತ್ತಲಲ್ಲಿ ಮುಳುಗಿರುವುದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ.
ಗಡಿಯ ನಂದಾರಪದವಿನಿಂದ ಚೇವಾರ್ ವರೆಗೆ ಸುಮಾರು 28 ಕಿಲೋಮೀಟರ್ ಉದ್ದದ ಈ ಹೆದ್ದಾರಿಯಲ್ಲಿ ಅಳವಡಿಸಿದ್ದ ಸೌರಶಕ್ತಿ ಚಾಲಿತ ದೀಪಗಳು ಬಹುತೇಕ ಕೆಟ್ಟು ನಿಂತಿವೆ. ಆದರೆ ಸಮಸ್ಯೆಯನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲೆನಾಡಿನ ಅಭಿವೃದ್ಧಿಯ ಕನಸಾಗಿ ನಿರ್ಮಿಸಲಾದ ಈ ಹೆದ್ದಾರಿ, ಇದೀಗ ರಾತ್ರಿ ಹೊತ್ತು ಜನರಲ್ಲಿ ಭೀತಿ ಮೂಡಿಸುವಂತಾಗಿದೆ. ರಸ್ತೆಗೆ ಬೆಳಕು ನೀಡಲು ನಿರ್ದಿಷ್ಟ ಅಂತರದಲ್ಲಿ ಅಳವಡಿಸಿದ್ದ ಸೋಲಾರ್ ದೀಪಗಳಲ್ಲಿ ಹೆಚ್ಚಿನವು ಕಾರ್ಯನಿರ್ವಹಿಸದೆ ನಿಷ್ಕ್ರಿಯವಾಗಿವೆ. ಕೆಲವು ಕಡೆಗಳಲ್ಲಿ ಸಮಾಜವಿರೋಧಿ ಶಕ್ತಿಗಳು ದೀಪಗಳ ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆಗಳೂ ನಡೆದಿದ್ದು, ಅವುಗಳನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ವರ್ಕಾಡಿ, ಮೀಂಜ ಮತ್ತು ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ಹಾದುಹೋಗುವ ಈ ರಸ್ತೆಯಲ್ಲಿ ಅತ್ಯಾಧುನಿಕ ಬಸ್ ತಂಗುದಾಣಗಳು ಹಾಗೂ ಪಾದಚಾರಿ ಮಾರ್ಗಗಳು ನಿರ್ಮಿಸಲಾಗಿದೆ. ಆದರೆ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ಹೊತ್ತು ಈ ಸೌಲಭ್ಯಗಳು ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗುತ್ತಿಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ.
“ಎರಡು ವರ್ಷಗಳಿಂದ ಇಲ್ಲಿ ಬೆಳಕಿಲ್ಲದೆ ಕತ್ತಲೆ ಆವರಿಸಿದೆ. ನವಕೇರಳ ಸದಸ್ ಹಾಗೂ ಲೋಕೋಪಯೋಗಿ ಇಲಾಖೆಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ರಾತ್ರಿ ವೇಳೆ ಕಾಲ್ನಡಿಗೆಯೂ ಅಸಾಧ್ಯವಾಗಿದೆ. ಕಾಡುಪ್ರಾಣಿಗಳ ಕಾಟ ಹಾಗೂ ಸಮಾಜವಿರೋಧಿಗಳ ಭಯದಿಂದ ಬದುಕುವಂತಾಗಿದೆ,” ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ರಸ್ತೆ ದೀಪಗಳ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವುದು ರೂಢಿಯಾಗಿದೆ. ಆದರೆ ವರ್ಕಾಡಿ, ಮೀಂಜ ಮತ್ತು ಪೈವಳಿಕೆ ಪಂಚಾಯತ್ಗಳಿಗೆ ಈ ದೀಪಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇಲಾಖೆಗಳ ನಡುವಿನ ಈ ಗೊಂದಲದಿಂದ ಸಾರ್ವಜನಿಕರು ಕತ್ತಲಲ್ಲಿ ಪ್ರಯಾಣಿಸುವಂತಾಗಿದೆ.
ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ಮಲೆನಾಡು ಹೆದ್ದಾರಿಯ ಈ ಕತ್ತಲ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.