ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ಹಸ್ತಾಂತರ

ಕಾಸರಗೋಡು: ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಚೆಂಗಳ ಗ್ರಾಮ ಪಂಚಾಯಿತಿಯ ಮೀನಾಡಿ ಪಳ್ಳದಲ್ಲಿ ನಡೆಯಿತು.

ಕಾಸರಗೋಡು ಜಿಲ್ಲೆಯ ಚೆಂಗಳ ಪಂಚಾಯಿತಿಯ 1ನೇ ವಾರ್ಡಿನ ನಿವಾಸಿ ಯಮುನಾ ಅವರಿಗೆ ಮಂಜೂರಾದ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮವು ಕಾಸರಗೋಡು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮಗಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತ ಅಜಕ್ಕೋಡು ಅವರು ನಾಮಫಲಕ ಅನಾವರಣ ಮಾಡಿದರು. ದಕ್ಷಿಣ ಕನ್ನಡ–2 ಜಿಲ್ಲೆಯ ನಿರ್ದೇಶಕರಾದ ಬಾಬು ನಾಯ್ಕ ಅವರು ಫಲಪುಷ್ಪಗಳೊಂದಿಗೆ ಮನೆಯ ಕೀಲಿಯನ್ನು ನೀಡಿ ವಾತ್ಸಲ್ಯ ಮನೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರಾದ ನವೀನ್ ಭಟ್, ಲಕ್ಷ್ಮೀ ಶೆಟ್ಟಿ, ಬದಿಯಡ್ಕ ಪಂಚಾಯತ್ ಸದಸ್ಯ ಶ್ಯಾಮ್ ಪ್ರಸಾದ್, ತಾಲೂಕಿನ ಯೋಜನಾಧಿಕಾರಿ ದಿನೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ ಗಿರೀಶ್, ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿಗಳಾದ ಹೇಮಲತಾ, ರಾಜೀವಿ, ಒಕ್ಕೂಟದ ಅಧ್ಯಕ್ಷ ಸುನಿಲ್ ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

ವಾತ್ಸಲ್ಯ ಯೋಜನೆಯ ಉದ್ದೇಶ

ಅಸಹಾಯಕರು ಹಾಗೂ ಪೋಷಣೆ ಇಲ್ಲದ ಕುಟುಂಬಗಳು ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿರುವುದನ್ನು ಗಮನಿಸಿ, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು ಅವರ ವಾತ್ಸಲ್ಯಮಯ ಮನಸ್ಸಿನಿಂದ ವಾತ್ಸಲ್ಯ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ದಕ್ಷಿಣ ಕನ್ನಡ–2 ಜಿಲ್ಲೆಯ ನಿರ್ದೇಶಕರಾದ ಬಾಬು ನಾಯ್ಕ ತಿಳಿಸಿದ್ದಾರೆ.

ಈ ಯೋಜನೆಯಡಿ ತಾಲೂಕಿನಲ್ಲಿ ಪ್ರಾಥಮಿಕ ಸರ್ವೇಕ್ಷಣೆ ನಡೆಸಿ ತಿಂಗಳಿಗೆ 88 ಕುಟುಂಬಗಳಿಗೆ ಒಟ್ಟು ₹88,000 ಮಾಸಾಶನ ನೀಡಲಾಗುತ್ತಿದೆ.

ಜ್ಞಾನವಿಕಾಸ ಕಾರ್ಯಕ್ರಮದ ವ್ಯಾಪ್ತಿ

ಕಾಸರಗೋಡು ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳು ಯಶಸ್ವಿಯಾಗಿ ಜಾರಿಯಲ್ಲಿವೆ. ಜ್ಞಾನವಿಕಾಸ ಕಾರ್ಯಕ್ರಮದಡಿ ಸೂರು ಇಲ್ಲದವರಿಗೆ ಸೂರು ನೀಡುವ ಉದ್ದೇಶದಿಂದ ಯಮುನಾ ಕುಟುಂಬಕ್ಕೆ ಮನೆ ಮಂಜೂರಾಗಿದೆ.

ಈ ಕುಟುಂಬಕ್ಕೆ ಈಗಾಗಲೇ ವಾತ್ಸಲ್ಯ ಕಿಟ್‌ನಡಿ ಚಾಪೆ, ದಿಂಬು, ಹೊದಿಕೆ, ಪಾತ್ರೆ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ. ಮಗುವಿನ ವಿದ್ಯಾಭ್ಯಾಸಕ್ಕಾಗಿ ವಾತ್ಸಲ್ಯ ವಿದ್ಯಾನಿಧಿ ಮೂಲಕ ಬ್ಯಾಗ್, ಪುಸ್ತಕ ಮತ್ತು ಕಲಿಕಾ ಸಾಮಗ್ರಿ ನೀಡಲಾಗಿದೆ. ಆರೋಗ್ಯ ಸುಧಾರಣೆಗೆ ಪ್ರತಿ ತಿಂಗಳು 2 ಕೆಜಿ “ವಾತ್ಸಲ್ಯ ಮಿಕ್ಸ್” ಆಹಾರ ಪದಾರ್ಥ ನೀಡಲಾಗುತ್ತಿದೆ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮಗಂ ತಿಳಿಸಿದ್ದಾರೆ.

ಪ್ರಸ್ತುತ ಕಾಸರಗೋಡು ತಾಲೂಕಿನಲ್ಲಿ 25 ಜ್ಞಾನವಿಕಾಸ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 141 ತಂಡಗಳಲ್ಲಿ 1288 ಮಂದಿ ಸದಸ್ಯರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಪಂಚಾಯಿತಿಯಿಂದ ಸಹಕಾರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯ ಅಭಿವೃದ್ಧಿಗೆ ಹಲವು ನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಯಮುನಾ ಕುಟುಂಬಕ್ಕೆ ಮನೆ ನಿರ್ಮಿಸಿ ಆಶ್ರಯ ಒದಗಿಸಿರುವುದು ಸಂತಸದ ಸಂಗತಿ. ಯೋಜನೆಯ ಎಲ್ಲ ಕಾರ್ಯಗಳಿಗೆ ಪಂಚಾಯಿತಿಯ ಪೂರ್ಣ ಸಹಕಾರವಿದೆ ಎಂದು ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತ ಅಜಕ್ಕೋಡು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!