ಮಂಜೇಶ್ವರ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ನೀರ್ಚಾಲು ಸಮೀಪದ ಕನ್ಯಪ್ಪಾಡಿಯಲ್ಲಿ ಸೋಮವಾರ ತಡರಾತ್ರಿ ಬೃಹತ್ ಗಾತ್ರದ ಕಾಡುಕೋಣವೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಭೀತಿ ಮೂಡಿಸಿದೆ.
ಸೋಮವಾರ ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಕನ್ಯಪ್ಪಾಡಿಯ ಬಸ್ ತಂಗುದಾಣದ ಮುಂಭಾಗದಲ್ಲಿ ಈ ಕಾಡುಕೋಣ ದೀರ್ಘಕಾಲ ಬೀಡುಬಿಟ್ಟಿತ್ತು. ಈ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸವಾರರು ಅದರ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಕೆಲ ದಿನಗಳ ಹಿಂದೆಯೂ ಇದೇ ಪ್ರದೇಶದಲ್ಲಿ ಕಾಡುಕೋಣ ಕಂಡಿರುವ ಬಗ್ಗೆ ಸುದ್ದಿಯಾಗಿತ್ತಾದರೂ, ಯಾವುದೇ ಆಧಾರವಿಲ್ಲದ ಕಾರಣ ಜನರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.