ಮಂಜೇಶ್ವರ: ಹೊಸಂಗಡಿಯ ಲಾಡ್ಜ್ವೊಂದರಲ್ಲಿ ಪ್ರೇಮಿಗಳನ್ನು ಬೆದರಿಸಿ ನಗ್ನ ವಿಡಿಯೋ ಚಿತ್ರೀಕರಿಸಿದ ‘ಹನಿಟ್ರ್ಯಾಪ್’ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಅಮಾನವೀಯವಾಗಿ ಕಲ್ಲು ತೂರಾಟ ನಡೆಸಿದ ಘಟನೆ ಮಚ್ಚಂಪಾಡಿಯಲ್ಲಿ ನಡೆದಿದೆ. ಕಾನೂನು ರಕ್ಷಕರ ಮೇಲೆಯೇ ನಡೆದ ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಮಂಜೇಶ್ವರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಜನವರಿ 14ರಂದು ಹೊಸಂಗಡಿಯ ಲಾಡ್ಜ್ಗೆ ಅತಿಕ್ರಮಿಸಿ ಪ್ರೇಮಿಗಳನ್ನು ಬೆದರಿಸಿ, ಅವರ ನಗ್ನ ವಿಡಿಯೋ ಮಾಡಿ ಹಣ ವಸೂಲಿ ಮಾಡಿದ್ದ ತಂಡದಲ್ಲಿ ಮಚ್ಚಂಪಾಡಿಯ ಹೈದರ್ ಅಲಿ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಜೈಲಿಗಟ್ಟಲಾಗಿದ್ದು, ತಲೆಮರೆಸಿಕೊಂಡಿದ್ದ ಹೈದರ್ ಅಲಿ ಮನೆಗೆ ಮರಳಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಶುಕ್ರವಾರ ರಾತ್ರಿ 11 ಗಂಟೆಗೆ ಮುತ್ತಿಗೆ ಹಾಕಿದ್ದರು.
ಆರೋಪಿಯನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಆತನ ಪತ್ನಿ ಸೇರಿದಂತೆ ಎಂಟು ಮಂದಿಯ ತಂಡ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದೆ ಎನ್ನಲಾಗಿದೆ. ಆರೋಪಿಯನ್ನು ರಕ್ಷಿಸುವ ಸಲುವಾಗಿ ತಂಡವು ಪೊಲೀಸರ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿ ಭೀತಿ ಹುಟ್ಟಿಸಿದೆ. ಈ ಪೈಶಾಚಿಕ ಆಕ್ರಮಣದಲ್ಲಿ ಎಎಸ್ಐ ಸದನ್ ಮತ್ತು ಪೊಲೀಸ್ ಸಿಬ್ಬಂದಿ ವಂದನಾ ಗಾಯಗೊಂಡಿದ್ದಾರೆ.
ಪೊಲೀಸರ ಮೇಲೆ ದಾಳಿ ನಡೆಸಿ ಆರೋಪಿಗೆ ಸಾಥ್ ನೀಡಿದವರ ವಿರುದ್ಧ ಪೊಲೀಸರು ಇದೀಗ ಮತ್ತೊಂದು ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಷ್ಟೇ ಪ್ರತಿರೋಧ ಬಂದರೂ ಆರೋಪಿಯನ್ನು ಕಂಬಿ ಹಿಂದೆ ತಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ.