ಯುದ್ಧದ ಬೆಂಕಿ

ಕೆಟ್ಟು ಪಟ್ಟಣ ಸೇರು ಎಂಬ ಗಾದೆ ಮಾತಿದೆ, ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ನಾನು ಪಟ್ಟಣ ಸೇರಿ ಕೆಟ್ಟೆನೇನೋ ಎಂದು ಅನಿಸುತ್ತಿದೆ. ಒಂದು ವರ್ಷದ ಹಿಂದೆ ಕೆಲಸಕ್ಕೆ ಎಂದು ಬೆಂಗಳೂರು ಸೇರಿದೆ.ಸಿಟಿಗೆ ಬಂದ ನನಗೆ ಮೊದ-ಮೊದಲು ಪಿಜಿಯು ಆಶ್ರವನ್ನೇನೋ ಕೊಟ್ಟಿತ್ತು, ಅಲ್ಲಿಯ ಕಾಲಮಿತಿ, ಆಹಾರ ಪದ್ಧತಿ ಸರಿಹೋಗದೆ ಹೇಗೋ ಕಷ್ಟಪಟ್ಟು ಚಿಕ್ಕದಾದಂತಹ ಒಂದು ಮನೆ ನೋಡಿಕೊಂಡೆ. ಮನೆಯಾದರೆ ಸಾಕೆ ಅಡುಗೆ ಮಾಡಬೇಕು,ಪಾತ್ರೆ, ಬಟ್ಟೆ ತೊಳೆಯಬೇಕು……ಇಂತಹ ಹಲವಾರು ಕೆಲಸಗಳನ್ನು ಖುದ್ದು ಮಾಡಬೇಕು.ನಾನು 5 ಕೆಜಿಯ ಚಿಕ್ಕ lpg ಸಿಲಿಂಡರ್ ಇಟ್ಟುಕೊಂಡು ಏನೋ ಚೂರೋ ಪಾರೋ ಬೇಯಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಯಾವಾಗಲಾದರೂ ನನ್ನ ಕೆಟ್ಟ ಕೈರುಚಿ ಬದಲಾಯಿಸಲು ಹೊರಗಡೆ ಹೋಟೆಲ್ ನಲ್ಲಿ ತಿಂದು ಬರುತ್ತಿದ್ದೆ. ಈಗ ಇಸ್ರೇಲ್, ಇರಾನ್ ಯುದ್ಧದಿಂದಾಗಿ ಪರಿಸ್ಥಿತಿ ಚಿಂತಾಜನಕವಾಗಿದೆ.


ನಮ್ಮಂತಹ ಬಡಪಾಯಿಗಳಿಗೆ ಇಲ್ಲಿಯೋ ಅಲ್ಲಿಯೋ ಒಬ್ಬೊಬ್ಬ ಎಜೇಂಟ್ರು ಖಾಲಿ ಹಂಡೆ ಕೊಟ್ಟರೆ ಬದಲಿಗೆ ತುಂಬಿದ ಹಂಡೆಯನ್ನು ಕೊಡುತ್ತಿದ್ದರು. ಇಲೆಕ್ಟ್ರಿಕ್ ವಸ್ತುಗಳನ್ನು ಉಪಯೋಗಿಸಬೇಕೆಂದರೆ ಮನೆಯ ಮಾಲೀಕನ ತಕರಾರು ಇದೆಯಲ್ಲವೇ? ಈಗ ಸಾಮಾನ್ಯ ಜನರಿಗೆ ಬುಕ್ಕಿಂಗ್ ಆಪನ್ನು ಬ್ಲಾಕ್ ಮಾಡಿದ್ದಾರಂತೆ ನನ್ನ ಕಥೆ ಇನ್ನು ಬರೀ ವ್ಯಥೆ. ಏಕೆಂದರೆ ನನ್ನ ಗ್ಯಾಸಿನ ಹಂಡೆ ಇನ್ನೇನು ಇವತ್ತೋ ನಾಳೆಯೋ ಖಾಲಿಯಾಗಬಹುದು. ಇಷ್ಟು ದಿನದವರೆಗೆ ಆಫೀಸಿನಲ್ಲಿ ಮಧ್ಯಾಹ್ನ ಬಿಸಿ ಬಿಸಿ ಊಟ ಬಡಿಸುತ್ತಿದ್ದರು. ಈಗ ಅಡುಗೆ ಅನಿಲದ ಕೊರತೆ ಎಂದು ಅದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಮೊದಲೇ ಇದ್ದ ಸಂಕಷ್ಟ ಸಾಲದೆಂದು ಗಾಯದ ಮೇಲೆ ಬರೆ ಬೇರೆ! ಹೋಟೆಲ್ ಗೆ ಹೋಗಿ ತಿಂದು ಹೊಟ್ಟೆ ತುಂಬಿಸೋಣವೆಂದರೆ, ಹೆಚ್ಚಿನವು ಬಂದಾಗಿವೆ, ಓಪನ್ ಇರುವುದರಲ್ಲಿ ನಮಗೆ ಬೇಕಾದ ತಿಂಡಿ ಇರುವುದಿಲ್ಲ .
ಊರಿನಲ್ಲಿ ಇರಬೇಕಾದರೆ ನನ್ನ ಅಮ್ಮನೇ, ಕರೆಂಟ್ ಇಲ್ಲವೆಂದರೆ ಅರೆಯುವ ಕಲ್ಲಿನಲ್ಲಿ ಅರೆದು,
ಗ್ಯಾಸ್ ಇಲ್ಲವಾದರೆ ಸೌದೆ ಒಲೆಯಲ್ಲಿ ಬೆಂಕಿ ಮಾಡಿ ಅಡುಗೆ ಮಾಡುತ್ತಿದ್ದರು. ಮೊದಲಿನ ಸರಕಾರ ಇರಬೇಕಾದರೆ ಬೇಕೆಂದಾಗ ಅಡುಗೆ ಅನಿಲ ಸಿಗುತ್ತಿರಲಿಲ್ಲವಲ್ಲಾ. ಆದರೆ ಈಗಿನ ಸರಕಾರವು ಯಾವುದೋ ಮೂಲೆ ಮೂಲೆಗಳಲ್ಲಿರುವ ಮನೆಗಳನ್ನೂ ಬಿಡದೇ ಎಲ್ ಪಿ ಜಿ ಸಿಲಿಂಡರ್ ಗಳನ್ನು ಮನೆ ಬಾಗಿಲುಗಳಿಗೆ ತಲುಪಿಸಿದೆ. ಅಡುಗೆ ಅನಿಲ ಈಗ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಎಲ್ಲರಿಗೂ ಕಟ್ಟಿಗೆ ಉರಿಸಿ ಅಡುಗೆ ಮಾಡುವುದು ಈಗ ಕನಸಿನ ಮಾತಾಗಿದೆ . ನಮ್ಮ ಮನೆಯಲ್ಲಿ ಅಂತೂ ಯಾವುದೋ ದೇಶದಿಂದ ಬರುವ ಅಗ್ಗದ ಎಲ್‌ಪಿಜಿ ಗಿಂತ ನಮ್ಮದೇ ಗುಡ್ಡದಲ್ಲಿ ಸಿಗುವ ಸೌದೆಯನ್ನು ಶೇಖರಿಸುವುದು ದುಬಾರಿಯಾಗಿದೆ. ಇಂದಿನ ಅತಿಯಾದ ಜನಸಂಖ್ಯೆ ಹಾಗೂ ಕಾಡು ಕಡಿಮೆ ಆಗಿರುವುದರಿಂದ ಸೌದೆ ಒಲೆ ಉಪಯೋಗ ಮಾಡುಬೇಕೆಂಬುದು ಕಷ್ಟ ಸಾಧ್ಯವಾಗಿದೆ.
ನಾವು ‘ಟಕ್’ ಎಂದು ಸ್ಟವ್ ಉರಿಸುವಾಗಲೋ, ಬಗೆ ಬಗೆ ತಿಂಡಿ ತಿನಿಸು ತಿನ್ನುವಾಗಲೋ , ಮೃಷ್ಟಾನ್ನ ಭೋಜನ ಮಾಡುವಾಗಲೋ ಅಥವಾ ಅತಿಯಾಗಿ ಗ್ಯಾಸ್ ವೇಸ್ಟ್ ಮಾಡುವಾಗಲೋ,ಇನ್ನಾವುದೋ ದೇಶದ ಭೂಮಿಯ ಆಳದಿಂದ ನಮ್ಮ ಅಡುಗೆ ಮನೆಗೆ ಸೇರಬೇಕಾದರೆ ಅದರ ಸಂಚಾರದ ಹಾದಿ ಹೇಗಿರುತ್ತದೆ? ಉತ್ಪಾದನೆಯ ಕಠಿಣತೆ ಏನು?ಎಂಬುದರ ಬಗ್ಗೆ ಯೋಚನೆ ಮಾದಿದ್ದೇವೆಯೇ? ಖಂಡಿತ ಇಲ್ಲ . ಈಗ ನಡೆಯುತ್ತಿರುವ ಯುದ್ಧದ ಬೆಂಕಿ ನಮ್ಮ ಒಲೆಗಳನ್ನು ನಂದಿಸಿವೆ. ಉರಿಯುವ ಬೆಂಕಿ ಇನ್ನೂ ಮುಂದುವರಿದರೆ ಆದಿ ಮಾನವರಂತೆ ಗೆಡ್ಡೆ ಗೆಣಸು ತಿನ್ನಬೇಕಾಗುತ್ತದೆನೋ!!

ಬರಹ: ಭಾರತೀ
ನೀರ್ಪಾಜೆ ಹೌಸ್ ಕನ್ಯಾನ ಪೋಸ್ಟ್

SHARE
Loading spinner

2 thoughts on “ಯುದ್ಧದ ಬೆಂಕಿ

  1. 100% true ..this is the reality for those of us who move from village to city, trying to adjust to corporate life. We’ve faced so many struggles along the way, and now even dealing with gas problems has become part of the journey. You’ve explained it so well and captured the reality perfectly. Keep going ..looking forward to more posts about middle-class life and our everyday challenges!

    Loading spinner
  2. ಸೊಗಸಾದ ಬರವಣಿಗೆ.ಇಂದಿನವಿಶ್ವ ಮಾರುಕಟ್ಟೆ ಯ ವ್ಯವಸ್ಥೆ ಯಲ್ಲಿ ಎಲ್ಲಿ ಯುದ್ಧ ನಡೆದರೂ ಎಲ್ಲೆಡೆಯೂ ಜನಸಾಮಾನ್ಯರು ಬವಣೆ ಅನುಭವಿಸುವ ಹಾಗಾಗುತ್ತದೆ.ಯುದ್ಧ ಆರಂಭಿಸಿದವರ ಕೈಯಲ್ಲಿ ಯಾವಾಗ ನಿಲ್ಲಿಸಬೇಕೆಂದು ತೀರ್ಮಾನ ಮಾಡಲು ಸಾಧ್ಯವಿಲ್ಲ.ಹಲವು ವಿಷಯಗಳಿಂದ ಪ್ರಭಾವಕ್ಕೊಳಗಾಗಿ ಗೊಂದಲದಲ್ಲಿದ್ದಾರೆ

    Loading spinner

Leave a Reply

Your email address will not be published. Required fields are marked *

error: Content is protected !!