ಸಂಪೂರ್ಣ ಹದಗೆಟ್ಟಿದ ವರ್ಕಾಡಿ ರಸ್ತೆ ಸ್ಥಳೀಯರ ಆಕ್ರೋಶ

ಮಂಜೇಶ್ವರ: ವರ್ಕಾಡಿ ಪಂಚಾಯತ್‌ ವ್ಯಾಪ್ತಿಯ 2 ಹಾಗೂ 15 ನೇ ವಾರ್ಡ್‌ಗಳಿಗೆ ಸೇರಿದ ಮುಡಿಮಾರ್ ಮತ್ತು ಸುಂಕದಕಟ್ಟೆಯನ್ನು ಹಾಗೂ ಕರ್ನಾಟಕದ ಗಡಿಯನ್ನು ಸುಲಭವಾಗಿ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದ್ದರೂ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಯಾರೂ ಇತ್ತ ಗಮನ ಹರಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ರಸ್ತೆಯನ್ನು ಅವಲಂಬಿಸಿ ಸುಮಾರು 250 ಕುಟುಂಬಗಳು ಇಲ್ಲಿ ವಾಸಿಸುತ್ತಿದೆ. ಈ ರಸ್ತೆ ಭಾರೀ ಶೋಚನೀಯಾವಸ್ಥೆಗೆ ತಲುಪಿದೆ. 15 ವರ್ಷಗಳ ಹಿಂದೆ ನಿರ್ಮಿಸಲಾದ ಈ ರಸ್ತೆಗೆ ಮರು ಡಾಮಾರೀಕರಣ ಮಾಡುವ ಎಲ್ಲಾ ಸಿದ್ಧತೆಗಳು ನಡೆದಿದ್ದರೂ ಕೆಲವು ರಾಜಕೀಯ ವ್ಯಕ್ತಿಗಳ ಪ್ರಭಾವದಿಂದಾಗಿ ಅದು ಪ್ರಾರಂಭವಾಗುವ ಮೊದಲೇ ನಿಂತುಹೋಗಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.

ಈ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಇತರ ಮಂದಿ ಉದ್ಯೋಗಕ್ಕೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಮಂಗಳೂರು ಮತ್ತು ಇತರ ಪ್ರದೇಶಗಳಿಗೆ ಹೋಗಲು ಇದೇ ರಸ್ತೆಯನ್ನೇ ಆಶ್ರಯಿಸಬೇಕಾಗಿದೆ. ಮಳೆಗಾಲದಲ್ಲಂತೂ ಇಲ್ಲಿಯ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ವಿದ್ಯಾರ್ಥಿಗಳಿಗೆ ಕೆಸರಿನ ಗದ್ದೆಗೆ ಇಳಿದ ಅನುಭವದಂತಾಗಿದೆ.

ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಯಾವುದೇ ವಾಹನ ಈ ದಾರಿಯಾಗಿ ಬರುವುದಿಲ್ಲ. ರೋಗಿಗಳು, ಗರ್ಭಿಣಿಯರು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಎಲ್ಲಾ ರಾಜಕಾರಣಿಗಳಿಗೂ ಈ ವಿಷಯ ತಿಳಿದಿದ್ದರೂ ಕಂಡೂ ಕಾಣದ ರೀತಿಯಲ್ಲಿ ಜಾಣ ಕುರುಡುತನ ಪ್ರದರ್ಶಿಸಿಕೊಂಡು ಅವರು ಯಾವುದೇ ರೀತಿಯ ವ್ಯವಸ್ಥೆ ಮಾಡಲು ವಿಫಲರಾಗಿರುವುದಾಗಿ ಸ್ಥಳೀಯ ನಾಗರಿಕರು ಹೇಳುತಿದ್ದಾರೆ.

ಇಲ್ಲಿನ ಜನರ ಪರಿಸ್ಥಿತಿ ಹೇಗಿದೆಯೆಂದರೆ ಪ್ರತಿ ವರ್ಷ ಮಳೆಗಾಲ ಆರಂಭವಾದರೆ ಈ ರಸ್ತೆಯಲ್ಲಿ ಎರಡು ಕಿ.ಮೀ ನಡೆಯಲು ಸಹ ಸಾಧ್ಯವಿಲ್ಲ. ವಿಪರ್ಯಾಸವೆಂದರೆ ಈ ವರ್ಷದ ಮೊದಲ ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆಯ ಅರ್ಧದಷ್ಟು ಭಾಗ ಗುಂಡಿಗಳಿಂದ ಆವೃತವಾಗಿದೆ. ಈ ವಿಷಯವನ್ನು ಸಂಬಂಧಪಟ್ಟವರಿಗೆ ಮತ್ತೊಮ್ಮೆ ತಿಳಿಸಲಾಗಿದೆ. ಇಲ್ಲಿಯ ಜನರ ಗೋಳನ್ನು ಯಾರೂ ಕೇಳುವವರು ಇಲ್ಲವೇ …? ಕೇವಲ ಚುನಾವಣೆ ಹತ್ತಿರ ಬರುವಾಗ ಉದ್ದುದ್ದದ ಭರವಸೆಗಳನ್ನು ನೀಡಿದವರು ಈಗ ಏಕೆ ನಾಪತ್ತೆಯಾಗಿದ್ದಾರೆ. ಜನರ ತಾಳ್ಮೆಯನ್ನು ಪರೀಕ್ಷಿಸದೆ ಸಂಬಂಧ ಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸಬೇಕಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!