ಬಂಟ್ವಾಳ: ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ರಿಕ್ಷಾ ಚಾಲಕರು ಗ್ಯಾಸ್ ಪಂಪ್ ಎದುರು ಸತತ ಎರಡನೇ ಬಾರಿ ಪ್ರತಿಭಟನೆ ನಡೆಸಿದ ಘಟನೆ ತಲಪಾಡಿ, ಬಿಸಿರೋಡು ಪ್ರದೇಶದಲ್ಲಿ ನಡೆದಿದೆ.
ತಲಪಾಡಿಯಲ್ಲಿರುವ ಅಟೋ ಗ್ಯಾಸ್ ಪಂಪ್‌ನಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ದುಪ್ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ. ಇದಲ್ಲದೆ, ಪಂಪ್ ಸಿಬ್ಬಂದಿ ದರ್ಪದ ಮಾತುಗಳಿಂದ ಬೆದರಿಸುವುದೂ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವಿಚಾರವಾಗಿ ಕೆಲವು ದಿನಗಳ ಹಿಂದೆಯೂ ಇದೇ ಗ್ಯಾಸ್ ಪಂಪ್ ಬಳಿ ಪ್ರತಿಭಟನೆ ನಡೆದಿದ್ದು, ಆಗ ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಆದರೆ ಇದೀಗ ಮತ್ತೆ ದರ ಸಂಬಂಧಿತ ಗೊಂದಲಗಳು ಉಂಟಾಗಿದ್ದು, ಚಾಲಕರು ತಮ್ಮ ರಿಕ್ಷಾಗಳನ್ನು ಪಂಪ್ ಮುಂದೆ ಸಾಲಾಗಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ದರದ ವಿಚಾರಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.


