ಇಸ್ರೇಲ್ ಮತ್ತು ಅಮೆರಿಕದ ದಾಳಿಗಳ ಬೆನ್ನಲ್ಲೇ ಮಾರ್ಚ್ 2ರಿಂದ ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಭಾರೀ ಪರಿಣಾಮ ಬೀರುತ್ತಿದೆ. ವಿಶ್ವದ ಪ್ರಮುಖ ತೈಲ ಸಾಗಣಾ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಮುಚ್ಚಿದ ಪರಿಣಾಮ, ಇಂಧನ ಬೆಲೆಗಳು ಜಗತ್ತಿನಾದ್ಯಂತ ಏರಿಕೆಯಾಗಿವೆ.
ಈ ಆತಂಕದ ನಡುವೆಯೇ, ಇರಾನ್ ಈಗ ಮತ್ತೊಂದು ಮಹತ್ವದ ಸಮುದ್ರ ಮಾರ್ಗವಾದ ಬಾಬ್-ಎಲ್-ಮಾಂಡೆಬ್ ಜಲಸಂಧಿಯ ಮೇಲೂ ತನ್ನ ನಿಯಂತ್ರಣ ಸಾಧಿಸಲು ಮುಂದಾಗಬಹುದು ಎಂಬ ಸುಳಿವು ನೀಡಿದ್ದು, ಜಾಗತಿಕ ವ್ಯಾಪಾರ ವಲಯದಲ್ಲಿ ಭೀತಿ ಹೆಚ್ಚಿಸಿದೆ.
ಇರಾನ್ ಸಂಸತ್ತಿನ ಸ್ಪೀಕರ್ Mohammad Bagher Ghalibaf ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಹೇಳಿಕೆಗಳು ಈ ಆತಂಕವನ್ನು ಮತ್ತಷ್ಟು ಗಂಭೀರಗೊಳಿಸಿವೆ. “ವಿಶ್ವದ ತೈಲ, ಎಲ್ಎನ್ಜಿ, ಗೋಧಿ, ಅಕ್ಕಿ ಮತ್ತು ರಸಗೊಬ್ಬರ ಸಾಗಣೆಯ ಎಷ್ಟು ಪಾಲು ಬಾಬ್-ಎಲ್-ಮಾಂಡೆಬ್ ಮೂಲಕ ಸಾಗುತ್ತದೆ? ಯಾವ ದೇಶಗಳು ಮತ್ತು ಕಂಪನಿಗಳು ಈ ಮಾರ್ಗವನ್ನು ಹೆಚ್ಚು ಅವಲಂಬಿಸಿವೆ?” ಎಂದು ಅವರು ಪ್ರಶ್ನಿಸಿದ್ದಾರೆ. ಈ ಹೇಳಿಕೆಗಳ ಮೂಲಕ, ಇರಾನ್ ತನ್ನ ಎದುರಾಳಿಗಳ ಮೇಲೆ ಒತ್ತಡ ಹೇರುವ ಉದ್ದೇಶ ಹೊಂದಿರಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಬಾಬ್-ಎಲ್-ಮಾಂಡೆಬ್ ಜಲಸಂಧಿಯು Red Sea ಮತ್ತು Gulf of Aden ಅನ್ನು ಸಂಪರ್ಕಿಸುವ ಅತ್ಯಂತ ಆಯಕಟ್ಟಿನ ಸಮುದ್ರ ಮಾರ್ಗವಾಗಿದೆ. ಈ ಜಲಸಂಧಿ ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಗೆ ಅತ್ಯಂತ ಪ್ರಮುಖವಾಗಿದೆ. ಇದೇ ಮಾರ್ಗದ ಮೂಲಕ ಗೋಧಿ, ಅಕ್ಕಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಸಾಗಣೆ ನಡೆಯುತ್ತದೆ. ಹೀಗಾಗಿ, ಈ ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾದರೆ, ಅದು ಇಂಧನ ಮಾರುಕಟ್ಟೆಯಷ್ಟೇ ಅಲ್ಲದೆ ಜಾಗತಿಕ ಆಹಾರ ಭದ್ರತೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದರ ನಡುವೆ, ಇರಾನ್ ಮತ್ತು ಅದರ ಮಿತ್ರಪಡೆಗಳು “ಆಪರೇಷನ್ ಟೂ ಪ್ರಾಮಿಸ್ 4” ಭಾಗವಾಗಿ “ವೇವ್ 93” ಕಾರ್ಯಾಚರಣೆಯನ್ನು ನಡೆಸಿರುವುದಾಗಿ ವರದಿಯಾಗಿದೆ. ಇದರಡಿ ಇಸ್ರೇಲ್ನ Haifa ಹಾಗೂ ಪಶ್ಚಿಮ ಗೆಲಿಲಿ ಪ್ರದೇಶಗಳಲ್ಲಿನ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಮಾರ್ಚ್ 28ರಂದು ಯೆಮನ್ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ, ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಹೌತಿ ಗುಂಪುಗಳು ಈಗಾಗಲೇ ಕೆಂಪು ಸಮುದ್ರದಲ್ಲಿ ಸಾಗುವ ವಾಣಿಜ್ಯ ಹಡಗುಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದು, ಇಸ್ರೇಲ್ಗೆ ಸಂಬಂಧಿಸಿದ ಹಡಗುಗಳೇ ತಮ್ಮ ಗುರಿ ಎಂದು ಘೋಷಿಸಿವೆ.
ಹಾರ್ಮುಜ್ ಜಲಸಂಧಿಯ ಬಂದ್ನಿಂದ ಈಗಾಗಲೇ ಜಾಗತಿಕ ವ್ಯಾಪಾರದಲ್ಲಿ ಕುಸಿತ ಕಂಡುಬಂದಿದೆ. ಇದರ ಜೊತೆಗೆ, ಬಾಬ್-ಎಲ್-ಮಾಂಡೆಬ್ ಕೂಡ ಬಂದ್ ಆದರೆ, ಜಗತ್ತು ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎಂಬ ಆತಂಕ ತಜ್ಞರಲ್ಲಿ ಮನೆಮಾಡಿದೆ.