“ಕೇರಳ ದಿವಾಳಿಯ ದಿಕ್ಕಿಗೆ” – ಎಲ್‌ಡಿಎಫ್ ವಿರುದ್ಧ ಸಿದ್ದರಾಮಯ್ಯ ಕಿಡಿ : ಕರ್ನಾಟಕ ಮಾದರಿ ಕೇರಳಕ್ಕೆ? ಸಿದ್ದರಾಮಯ್ಯ ದೊಡ್ಡ ಸಂದೇಶ

ಮಂಜೇಶ್ವರ: ಹತ್ತು ವರ್ಷಗಳ ಎಲ್‌ಡಿಎಫ್ ಆಡಳಿತವು ಕೇರಳವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯುತ್ತಿದ್ದು ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ಜನತೆ ಸಂಕಷ್ಟದಲ್ಲಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮಂಜೇಶ್ವರ ಸಮೀಪದ ವರ್ಕಾಡಿ ಮಜೀರ್‌ಪಳ್ಳದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಆಡಳಿತ ಮತ್ತು ಪ್ರಸ್ತುತ ಎಲ್‌ಡಿಎಫ್ ಸರ್ಕಾರದ ನಡುವೆ ಇರುವ ವ್ಯತ್ಯಾಸವನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದರು. “ಕೇರಳ ಇಂದು ಸಾಲದ ಸುಳಿಯಲ್ಲಿ ಸಿಲುಕಿದೆ. ಭ್ರಷ್ಟಾಚಾರ ಮತ್ತು ತಪ್ಪು ನಿರ್ಧಾರಗಳಿಂದ ಜನರ ಬದುಕು ದುಸ್ತರವಾಗಿದೆ,” ಎಂದು ಟೀಕಿಸಿದರು.

ಬಿಜೆಪಿಯ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಬಿಜೆಪಿ ಕೇವಲ ಶ್ರೀಮಂತರು ಮತ್ತು ಕಾರ್ಪೊರೇಟ್‌ಗಳ ಪರವಾಗಿದೆ. ರೈತರು, ದಲಿತರು, ಹಿಂದುಳಿದವರು ಮತ್ತು ಮಹಿಳೆಯರ ಹಿತಾಸಕ್ತಿಯನ್ನು ಕಡೆಗಣಿಸಿದೆ,” ಎಂದರು. ಕೇರಳದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳನ್ನು ಉದಾಹರಿಸಿ ಮಾತನಾಡಿದ ಸಿದ್ದರಾಮಯ್ಯ, ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ಹಾಗೂ ಉಚಿತ ವಿದ್ಯುತ್ ಯೋಜನೆಗಳ ಮೂಲಕ ಬಡವರ ಜೀವನ ಸುಧಾರಣೆಯಾಗಿದೆ ಎಂದು ತಿಳಿಸಿದರು. ಇದೇ ಮಾದರಿಯನ್ನು ಕೇರಳದಲ್ಲೂ ಜಾರಿಗೊಳಿಸಬಹುದು ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಯುಡಿಎಫ್ ಬಡವರ ಪರವಾಗಿರುವ ಪಕ್ಷಗಳಾಗಿದ್ದು, ಕೇರಳದ ಸಮಗ್ರ ಅಭಿವೃದ್ಧಿಗಾಗಿ ಎ.ಕೆ.ಎಂ. ಅಶ್ರಫ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಅಭ್ಯರ್ಥಿ ಅಶ್ರಫ್ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!