800 ವರ್ಷದ ಸೌಹಾರ್ದದ ಸಂಕೇತ: ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಉತ್ಸವ ದಿನಾಂಕ ನಿಗದಿ

ಕಳೆದ ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವದ ದಿನಾಂಕ ನಿಗದಿ ಸಮಾರಂಭವು ಶ್ರದ್ಧಾಭಕ್ತಿಯಿಂದ ನಡೆಯಿತು.

“ಕುದಿಕಳ” ಎಂಬ ಹೆಸರಿನಲ್ಲಿ ಸಂಪ್ರದಾಯ ಪ್ರಕಾರ ನಡೆಯುವ ಸಮಾರಂಭದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬನಿಂದ ದೈವಪಾತ್ರಿಗಳೇ ವೀಳ್ಯದೆಲೆ ಹಾಗೂ ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದೆಡೆ ದೇವಸ್ಥಾನ ಅಥವಾ ಕ್ಷೇತ್ರದ ಉತ್ಸವಕ್ಕೆ ಮುಸಲ್ಮಾನರು ವ್ಯಾಪಾರ ನಡೆಸಬಾರದೆಂಬ ಒತ್ತಡದ ಮಧ್ಯೆ ಮತ ಸೌಹಾರ್ದತೆಗೆ ಇನ್ನಷ್ಟು ಮೆರುಗನ್ನು ನೀಡುವ ಉದ್ಯಾವರ ಅರಸು ದೈವಗಳ ಉತ್ಸವದ ಸಂಪ್ರದಾಯಗಳು ಇತರರಿಗೆ ಮಾದರಿಯಾಗುತ್ತದೆ.

ಉದ್ಯಾವರ ಸಾವಿರ ಜಮಾಹತ್‌ನ ಸದಸ್ಯರು ಮತ್ತು ದೇವಸ್ಥಾನದ ಬ್ರಹ್ಮ ಸಭೆ ಎಡ ಬಲ ಕುಳಿತು ಸಮಾರಂಭದ ದಿನಾಂಕವನ್ನು ನಿಗದಿಪಡಿಸಲಾಯಿತು.ಉದ್ಯಾವರ ಶ್ರೀ  ಅರಸು ಮಂಜಿಷ್ಣಾರ್ ಕ್ಷೇತ್ರದ  ಉತ್ಸವವು ಕಾಸರಗೋಡು ಹಾಗೂ ದಕ್ಷಿಣ ಕನ್ನಡ  ಜಿಲ್ಲೆಯಲ್ಲಿಯೇ ಧಾರ್ಮಿಕ ಸೌಹಾರ್ದತೆಯ ಸಂದೇಶಗಳನ್ನು ಸಾರುವ ಹಬ್ಬಗಳಲ್ಲೊಂದಾಗಿದೆ.

ಉತ್ಸವಕ್ಕೆ ಸಮೃದ್ಧಿ ಮತ್ತು ಐಶ್ವರ್ಯವನ್ನು ತಂದೊಡ್ಡುವ ಅಣ್ಣ ತಮ್ಮ ದೈವಗಳು ಇಲ್ಲಿ ನೆಲೆಸಿದ್ದಾರೆ. ಹಬ್ಬದ ವಿಶೇಷ ಆಚರಣೆಗಳಲ್ಲೊಂದಾದ ಉತ್ಸವದ ದಿನ ನಿಶ್ವಯದ “ಕುದಿ ಕುಳ” ಎಂಬ ಹೆಸರಿನಲ್ಲಿ  ಕರೆಯಲಾಗುವ ಈ ಸಮಾರಂಭವು ಶ್ರದ್ಧಾಭಕ್ತಿಯ ವಾತಾವರಣದಲ್ಲಿ ನಡೆಯಿತು.ದೈವಪಾತ್ರಿಗಳು ಉತ್ಸವಕ್ಕೆ ಅನುಮತಿ ಪಡೆದು ಉತ್ಸವ ದಿನಾಂಕವನ್ನು ಘೋಷಿಸಿದರು.

ಸಂಪ್ರದಾಯದಂತೆ ತೆಂಗಿನಕಾಯಿ ವೀಳ್ಯದೆಲೆ ಮಾರಾಟವೂ ನಡೆಯಿತು. ದೈವಪಾತ್ರಿಗಳು, ಗುರಿಕ್ಕಾರರು ವೀಳ್ಯದೆಲೆ ಮಾರಟ ಮಾಡಲು  ನಿಯೋಜಿಸಲ್ಪಟ್ಟ  ಮುಸ್ಲಿಂ ಸಮುದಾಯದ ವ್ಯಕ್ತಿ   ಟಿ.ಎಸ್.ಸೈಯದ್ ರವರಿಂದ ವೀಳ್ಯದೆಲೆ ಹಾಗೂ ಅಡಿಕೆಯನ್ನು ಖರೀದಿಸಿದರು.ವಿಷು ನಂತರದ ಮೊದಲ ಶುಕ್ರವಾರದಂದು ಮಸೀದಿಗೆ ತೆರಳಿ ಜಮಾಹತ್ ಸದಸ್ಯರುಗಳನ್ನು ಉತ್ಸವಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು. ಮೇ 9 ರಂದು ಧ್ವಜಾರೋಹಣ, 11 ಮತ್ತು 12 ರಂದು ಬಂಡಿ ಉತ್ಸವ ನಡೆಯಲಿದೆ.

 ಸಂಜೀವ ಶೆಟ್ಟಿ, ,ಕಿರಣ್ ಶೆಟ್ಟಿ, ತಿಮ್ಮ ಭಂಡಾರಿ, ಉಮೇಶ್ ಪೂ ಮಣ್ಣು ಹಾಗೂ ವಿವಿಧ ಸಮಾಜದ ಮುಖಂಡರುಗಳು ನೇತೃತ್ವ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!