ಡ್ರೋನ್ ತರಬೇತಿ ಅಕಾಡೆಮಿ ಉದ್ಘಾಟನೆ – ಭವಿಷ್ಯದ ವಿಮಾನಯಾನ ತಜ್ಞರ ತಯಾರಿ : ಕ್ಯಾ.ಸುಧೀರ್ ಅಮೀನ್

ಮಂಗಳೂರು: ಮೂಡಬಿದ್ರೆಯ ಅಳ್ವಾಸ್ ಕಾಲೇಜು ಮೂಡಬಿದ್ರೆ ಆವರಣದಲ್ಲಿ, ವಿಮಾನಯಾನ ಹಾಗೂ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಪ್ರಥಮ ಏರೋಡೈನಾಮಿಕ್ಸ್ ಡ್ರೋನ್ ತರಬೇತಿ ಅಕಾಡೆಮಿಯು ಏಪ್ರಿಲ್ 14ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಕ್ಯಾ.ಸುಧೀರ್ ಅಮೀನ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಅಕಾಡೆಮಿಯು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್ (DGCA) ಮಾನ್ಯತೆ ಪಡೆದ ಅತ್ಯಾಧುನಿಕ ರಿಮೋಟ್ ಪೈಲಟ್ ತರಬೇತಿ ಸಂಸ್ಥೆಯಾಗಿದ್ದು, ಡ್ರೋನ್ ಕಾರ್ಯಾಚರಣೆ, ಏರಿಯಲ್ ತಂತ್ರಜ್ಞಾನ ಹಾಗೂ ಮಾನವರಹಿತ ವಿಮಾನ ವ್ಯವಸ್ಥೆಗಳ ತರಬೇತಿಗೆ ಮೀಸಲಾಗಿದೆ ಎಂದರು.

ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಡ್ರೋನ್ ಕ್ಷೇತ್ರಕ್ಕೆ ನುರಿತ ಹಾಗೂ ಪ್ರಮಾಣಿತ ಪೈಲಟ್‌ಗಳನ್ನು ಸೃಷ್ಟಿಸುವ ಉದ್ದೇಶದಿಂದ ಈ ಅಕಾಡೆಮಿಯನ್ನು ಆರಂಭಿಸಲಾಗುತ್ತಿದೆ. ಕೃಷಿ, ಮೂಲಸೌಕರ್ಯ, ನಿಗಾವಳಿ, ಫೋಟೋಗ್ರಫಿ, ವಿಪತ್ತು ನಿರ್ವಹಣೆ, ಲಾಜಿಸ್ಟಿಕ್ಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಡ್ರೋನ್‌ಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತರಬೇತಿ ಪಡೆದ ವೃತ್ತಿಪರರ ಅಗತ್ಯತೆ ಹೆಚ್ಚಾಗುತ್ತಿದೆ ಎಂದರು .

ಡಿಜಿಸಿಎ ಮಾರ್ಗಸೂಚಿಗಳ ಆಧಾರದ ಮೇಲೆ ರೂಪುಗೊಂಡ ಸಮಗ್ರ ತರಬೇತಿ ಕಾರ್ಯಕ್ರಮಗಳನ್ನು ಇಲ್ಲಿ ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಆಧುನಿಕ ಡ್ರೋನ್ ಸಾಧನಗಳು ಹಾಗೂ ಸಿಮ್ಯುಲೇಶನ್ ತಂತ್ರಜ್ಞಾನಗಳ ಮೂಲಕ ಪ್ರಾಯೋಗಿಕ ಹಾರಾಟದ ಅನುಭವವೂ ನೀಡಲಾಗುತ್ತದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯರಾದ ಧ್ಯಾನ್ ಕುವೆಲ್ಲೋ , ಶಾಲಿ , ಅಲ್ಡ್ರಿನ್ ಕ್ರಾಸ್ತಾ , ವಿಶಾಲ್ ಡಿಸೋಜಾ , ರವಿ ಶೆಟ್ಟಿ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!