ಮಂಗಳೂರು: ನಾರಿ ಶಕ್ತಿ ವಂದನ ಕಾಯ್ದೆ ಪ್ರಜಾಪ್ರಭುತ್ವಕ್ಕೆ ಮೈಲುಗಲ್ಲು—ಭಾಗೀರಥಿ ಮುರುಳ್ಯ

ಮಂಗಳೂರು: ನಾರಿ ಶಕ್ತಿ ವಂದನ ಕಾಯ್ದೆಯು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೊಂದು ಮಹತ್ವದ ಮೈಲುಗಲ್ಲಾಗಿದ್ದು, ಇದರ ಮೂಲಕ ಮಹಿಳೆಯರು ನೀತಿ ರೂಪಣೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 16ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಮಹಿಳೆಯರ ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿ ಕಲ್ಪಿಸುವ ಈ ನಿಬಂಧನೆ ಕೇವಲ ಪ್ರತಿನಿಧಿತ್ವವನ್ನು ಹೆಚ್ಚಿಸುವುದಕ್ಕೆ ಮಾತ್ರ ಸೀಮಿತವಾಗದೆ, ನಿರ್ಧಾರಾತ್ಮಕ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರವನ್ನು ವಿಸ್ತರಿಸುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ನೇತೃತ್ವದ ಅಭಿವೃದ್ಧಿಯೇ ಭಾರತವನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯಬಲ್ಲದು ಎಂದು ಸ್ಪಷ್ಟಪಡಿಸಿದ್ದು, ನಾರಿ ಶಕ್ತಿ ವಂದನ ಕಾಯ್ದೆಯ ಅನುಷ್ಠಾನವು ಈ ದೃಷ್ಟಿಕೋನವನ್ನು ಸಾಕಾರಗೊಳಿಸಲು ಪ್ರಮುಖವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆಗಳಾಗಿ ‘ಬೇಟಿ ಬಚಾವೋ ಬೇಟಿ ಪಡವೋ’, ‘ಸುಕನ್ಯಾ ಸಮೃದ್ಧಿ ಯೋಜನೆ’, ‘ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ’ ಹಾಗೂ ‘ಪೋಷಣ್ 2.0’ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಕೋಟ್ಯಂತರ ಮಹಿಳೆಯರು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಕೊಂಡಿದ್ದು, ಮುದ್ರಾ ಯೋಜನೆಯ ಸಾಲಗಳಲ್ಲಿ ಶೇ.68 ರಷ್ಟು ಮಹಿಳೆಯರ ಪಾಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಲೋಚನಾ ಜಿ.ಕೆ. ಭಟ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಮಂಜುಳಾ ರಾವ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಧ್ಯಾ ವೆಂಕಟೇಶ್ ಮತ್ತು ಲಖಿತಾ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!