ಮಂಜೇಶ್ವರ: ಅಭಿವೃದ್ಧಿ ಕಾಮಗಾರಿಗಳಿಗಾಗಿ ತಂದಿರಿಸಿದ ಸಾಮಗ್ರಿಗಳನ್ನು ಸಕಾಲದಲ್ಲಿ ಬಳಸದಿದ್ದರೆ ಅದು ಸಾರ್ವಜನಿಕರಿಗೆ ಹೇಗೆ ಹೊರೆಯಾಗಬಹುದು ಎಂಬುದಕ್ಕೆ ಮಂಜೇಶ್ವರ ಗ್ರಾಮ ಪಂಚಾಯತ್ನ 23ನೇ ವಾರ್ಡ್ ಒಂದು ಜ್ವಲಂತ ಉದಾಹರಣೆಯಾಗಿದೆ.
ಇಲ್ಲಿನ ನಿವಾಸಿ ಸನ್ನಿ ಎಂಬುವವರ ಖಾಸಗಿ ಜಾಗದಲ್ಲಿ ಕಾಲು ಸೇತುವೆಗೆ ಬಳಸಬೇಕಾದ ಸ್ಲಾಬ್ಗಳನ್ನು ತಂದಿರಿಸಿ ಬರೋಬ್ಬರಿ 5 ವರ್ಷಗಳು ಕಳೆದಿವೆ. ಆದರೆ, ಈವರೆಗೆ ಆ ಸ್ಲಾಬ್ಗಳನ್ನು ಅಲ್ಲಿಂದ ತೆರವುಗೊಳಿಸದೆ ಪಂಚಾಯತ್ ಆಡಳಿತವು ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದೆ.
ಸುಮಾರು ಐದು ವರ್ಷಗಳ ಹಿಂದೆ ಸ್ಥಳೀಯವಾಗಿ ಕಾಲು ಸೇತುವೆಯೊಂದನ್ನು ನಿರ್ಮಿಸುವ ಉದ್ದೇಶದಿಂದ ಪಂಚಾಯತ್ ವತಿಯಿಂದ ಈ ಬೃಹತ್ ಸ್ಲಾಬ್ಗಳನ್ನು ತರಲಾಗಿತ್ತು. ಕಾಮಗಾರಿ ನಡೆಯುವವರೆಗೆ ತಾತ್ಕಾಲಿಕವಾಗಿ ಸನ್ನಿ ಎಂಬುವವರ ಖಾಸಗಿ ಜಾಗದಲ್ಲಿ ಇರಿಸಲಾಗಿತ್ತು. ಆದರೆ ಸೇತುವೆ ನಿರ್ಮಾಣವೂ ಪೂರ್ಣಗೊಳ್ಳದೆ, ಇತ್ತ ಇರಿಸಿದ ಸ್ಲಾಬ್ಗಳನ್ನು ವಾಪಸ್ ಕೊಂಡೊಯ್ಯುವ ಸೌಜನ್ಯವನ್ನೂ ಪಂಚಾಯತ್ ಅಧಿಕಾರಿಗಳು ತೋರುತ್ತಿಲ್ಲ.
ತಮ್ಮ ಸ್ವಂತ ಜಾಗದಲ್ಲೇ ಸ್ಲಾಬ್ಗಳು ತುಂಬಿಕೊಂಡಿರುವುದರಿಂದ ಸನ್ನಿಯವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. “ನನ್ನ ಖಾಸಗಿ ಸ್ಥಳದಲ್ಲಿ ಈ ಸ್ಲಾಬ್ಗಳು ಇರುವುದರಿಂದ ಯಾವುದೇ ಅತ್ಯವಶ್ಯಕ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಮನೆ ರಿಪೇರಿ ಅಥವಾ ಜಾಗದ ಅಭಿವೃದ್ಧಿ ಮಾಡಲು ಹೋದರೆ ಈ ಕಾಂಕ್ರೀಟ್ ಸ್ಲಾಬ್ಗಳು ಅಡ್ಡಿಯಾಗುತ್ತಿವೆ,” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
”ಈ ಬಗ್ಗೆ ಹಲವು ಬಾರಿ ಪಂಚಾಯತ್ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಪ್ರತಿ ಬಾರಿಯೂ ‘ನಾಳೆ ಮಾಡುತ್ತೇವೆ, ಇಂದು ಮಾಡುತ್ತೇವೆ’ ಎಂಬ ಆಶ್ವಾಸನೆ ಸಿಗುತ್ತದೆಯೇ ವಿನಃ ಕಾರ್ಯರೂಪಕ್ಕೆ ಬಂದಿಲ್ಲ. ಒಬ್ಬ ಸಾಮಾನ್ಯ ಪ್ರಜೆಯ ಮನವಿಗೆ ಬೆಲೆಯೇ ಇಲ್ಲದಂತಾಗಿದೆ. ಎನ್ನುತಿದ್ದಾರೆ ಸನ್ನಿ
ಪಂಚಾಯತ್ನ ಈ ವಿಳಂಬ ನೀತಿಯು ಸಾರ್ವಜನಿಕರ ಹಣ ಮತ್ತು ಸಂಪನ್ಮೂಲದ ಪೋಲಾಗುವಿಕೆಯನ್ನು ತೋರಿಸುತ್ತಿದೆ. ಸರ್ಕಾರದ ಸ್ವತ್ತಾದ ಈ ಸ್ಲಾಬ್ಗಳು ಐದು ವರ್ಷಗಳಿಂದ ಮಳೆ-ಗಾಳಿಗೆ ಸಿಲುಕಿ ಹಾಳಾಗುತ್ತಿವೆ. ಕೂಡಲೇ ಸಂಬಂಧಪಟ್ಟ ವಾರ್ಡ್ ಸದಸ್ಯರು ಮತ್ತು ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡು, ಖಾಸಗಿ ವ್ಯಕ್ತಿಯ ಜಾಗದಿಂದ ಸ್ಲಾಬ್ಗಳನ್ನು ತೆರವುಗೊಳಿಸಿ ಅವರಿಗೆ ನ್ಯಾಯ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ