ಉಪ್ಪಳ ಪಟ್ಟಣದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ: ಹೊಸ ಉಚಿತ ಪಾರ್ಕಿಂಗ್ ವ್ಯವಸ್ಥೆ ಆರಂಭ

ಉಪ್ಪಳ ಪಟ್ಟಣದಲ್ಲಿ ತೀವ್ರಗೊಂಡಿದ್ದ ವಾಹನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಹೊಸ ಪಾರ್ಕಿಂಗ್ ಸೌಲಭ್ಯವನ್ನು ಆರಂಭಿಸಿದೆ.ಪ್ರಸ್ತುತ ಬಸ್ ನಿಲ್ದಾಣದ ಸಮೀಪದ ಮೇಲ್ಸೇತುವೆ ಕೆಳಭಾಗದಲ್ಲಿ ಬಹುತೇಕ ವಾಹನಗಳು ನಿಲ್ಲಿಸಲಾಗುತ್ತಿವೆ. ಆದರೆ ಅನೇಕ ವಾಹನಗಳು ಬೆಳಗ್ಗೆಯೇ ಬಂದು ರಾತ್ರಿ ಮಾತ್ರ ತೆರಳುತ್ತಿರುವುದರಿಂದ ವ್ಯಾಪಾರ ಸಂಸ್ಥೆಗಳ ಅಗತ್ಯಕ್ಕಾಗಿ ಬರುವ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸ್ಥಳ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಉಪ್ಪಳ ಬಸ್ ನಿಲ್ದಾಣದ ಸಮೀಪ ಮೀನು ಮಾರುಕಟ್ಟೆ ಪಕ್ಕದಲ್ಲಿರುವ ಸುಮಾರು ಮೂರು ಏಕರ ಜಾಗವನ್ನು ಪಂಚಾಯತ್ ಸಂಪೂರ್ಣ ಸ್ವಚ್ಛಗೊಳಿಸಿ ಪಾರ್ಕಿಂಗ್‌ಗೆ ಸಜ್ಜುಗೊಳಿಸಿದೆ.ದೀರ್ಘ ಸಮಯ ವಾಹನ ನಿಲ್ಲಿಸುವವರು ಈ ಹೊಸ ಸ್ಥಳವನ್ನು ಬಳಸಿಕೊಳ್ಳಬಹುದು. ತಾತ್ಕಾಲಿಕ ಅಗತ್ಯಕ್ಕಾಗಿ ಬರುವವರು ಮೇಲ್ಸೇತುವೆ ಕೆಳಭಾಗದಲ್ಲೇ ವಾಹನ ನಿಲ್ಲಿಸಬಹುದು ಎಂದು ಪಂಚಾಯತ್ ತಿಳಿಸಿದೆ.ವ್ಯಾಪಾರ ವಲಯದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.


ಈ ಜಾಗವನ್ನು ಖಾಸಗಿ ವ್ಯಕ್ತಿಗಳಾದ ಲತೀಫ್ ಉಪ್ಪಳ ಗೇಟ್ ಹಾಗೂ ಹಿಂದೂಸ್ಥಾನ್ ಬಿಲ್ಡರ್ಸ್ ಮಾಲೀಕ ಮೊಹಮ್ಮದ್ ಪಾವೂರು ಪಂಚಾಯತ್ ಮನವಿಗೆ ಸ್ಪಂದಿಸಿ ತಾತ್ಕಾಲಿಕವಾಗಿ ನೀಡಿರುವುದಾಗಿ ತಿಳಿಸಲಾಗಿದೆ.ಸಾರ್ವಜನಿಕರಿಗೆ ಉಚಿತವಾಗಿ ದೊರೆತಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಸ್ಥಳವನ್ನು ಸ್ವಚ್ಛವಾಗಿಡಬೇಕು ಎಂದು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಮನವಿ ಮಾಡಿದ್ದಾರೆ.ಇದೇ ವೇಳೆ ಉಪ್ಪಳ ಮೀನು ಮಾರುಕಟ್ಟೆಯಲ್ಲೂ ಫ್ಯಾನ್, ಲೈಟ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!