ಕುಂಬಳೆ ಪಂಚಾಯತ್ ವ್ಯಾಪ್ತಿಯ ಸೀತಾಂಗೋಳಿಯಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರೂ, ಸೀತಾಂಗೋಳಿ ಪ್ರದೇಶದಲ್ಲಿ ಸಂಜೆ ಬಳಿಕ ಗೂಂಡಾಗಳ ಅಟ್ಟಹಾಸ ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಸ್ಥಳೀಯರ ಪ್ರಕಾರ, ರಸ್ತೆ ಮೂಲಕ ಸಂಚರಿಸುವ ಬಸ್ಸುಗಳನ್ನೂ ಅಡ್ಡಗಟ್ಟಿ ನಿಲ್ಲಿಸಿದ ಘಟನೆಗಳು ಹಲವು ಬಾರಿ ನಡೆದಿದೆ. ಸೀತಾಂಗೋಳಿಯಲ್ಲಿ ಹೆಸರಿಗೆ ಮಾತ್ರ ಪೊಲೀಸ್ ಹೆಡ್ ಪೋಸ್ಟ್ ಇದ್ದು, ಅಲ್ಲಿ ಒಬ್ಬರು ಅಥವಾ ಇಬ್ಬರು ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿರುತ್ತಾರೆ ಎನ್ನಲಾಗಿದೆ.
ಆದರೆ, ಅವರು ಸಾಮಾನ್ಯ ಬೈಕ್ ಸವಾರರ ಮೇಲಷ್ಟೇ ಕ್ರಮ ಕೈಗೊಳ್ಳುತ್ತಾರೆ. ಬೀವರೇಜಸ್ ಅಂಗಡಿ ಸಮೀಪ ಪದೇ ಪದೇ ಜಗಳ, ಗಲಾಟೆಗಳು ನಡೆದರೂ ಪೊಲೀಸರು ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇತ್ತೀಚಿನ ಹತ್ಯೆ ಘಟನೆ ಬಳಿಕ ಕನಿಷ್ಠ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಬೀವರೇಜಸ್ ಸಮೀಪದ ಸಿಸಿ ಟಿವಿ ಕ್ಯಾಮೆರಾಗಳೂ ನಿಷ್ಕ್ರಿಯವಾಗಿವೆ ಎಂಬ ದೂರೂ ಕೇಳಿಬಂದಿದೆ.
ಗೂಂಡಾಗಳಿಗೆ ಯಾವುದೇ ಭಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಠಿಣ ತಪಾಸಣೆ ನಡೆಸಿ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.