ಕಡಬದಲ್ಲಿ ತ್ಯಾಜ್ಯ ಅವ್ಯವಸ್ಥೆ ವಿರುದ್ಧ ಜನರ ಆಕ್ರೋಶ!

ಕಡಬ: ಕೋಡಿಂಬಾಳ ಗ್ರಾಮದ ಕಕ್ಕೆತ್ತಿಮಾರ್ ನಲ್ಲಿರುವ ಕಡಬ ಪಟ್ಟಣ ಪಂಚಾಯತ್‌ನ ಘನ ತ್ಯಾಜ್ಯ ವಿಲೇವಾರಿ ಘಟಕದ ಅವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡಿರುವ ಸ್ಥಳೀಯ ಜನರು ಕೂಡಲೇ ಘಟಕದಲ್ಲಿ ರಾಶಿ ಬಿದ್ದು ಕೊಳೆತು ನಾರುತ್ತಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿ ತ್ಯಾಜ್ಯ ಸಾಗಾಟ ವಾಹನವನ್ನು ತಡೆದು ಪ್ರತಿಭಟಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.

ಕೊಳೆತು ನಾರುತ್ತಿರುವ ತ್ಯಾಜ್ಯ ಘಟಕ ಪ್ರತಿಭಟನೆಯ ವೇಳೆ ಮಾತನಾಡಿದ ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಪಾಲಪ್ಪೆ ಅವರು ಪಟ್ಟಣ ಪಂಚಾಯತ್‌ನ ಅಸಮರ್ಪಕ ಕಾರ್ಯನಿರ್ವಹಣೆಯ ಕಾರಣ ದಿಂದಾಗಿ ಘನ ತ್ಯಾಜ್ಯ ಘಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯದ ರಾಶಿ ಗಬ್ಬೆದ್ದು ನಾರುತ್ತಿದೆ. ಇತರೆಡೆ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿದ್ದರೂ ನಡೆಯುತ್ತಿದ್ದರೂ ತಾಲೂಕು ಕೇಂದ್ರವಾದ ಕಡಬದಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ. ತ್ಯಾಜ್ಯ ವಿಲೇವಾರಿಗೆ ಖರೀದಿಸಿರುವ ಲಕ್ಷಾಂತರ ರೂ. ಮೌಲ್ಯದ ಬಳಕೆಯಾಗದೆ ತುಕ್ಕುಹಿಡಿಯುತ್ತಿವೆ. ನಡೆದಿರುವ ಕಾಮಗಾರಿಗಳು ಕೂಡ ಕಳಪೆಯಾಗಿವೆ ಎಂದು ದೂರಿದ ಅವರು ಘಟಕದಲ್ಲಿ ತ್ಯಾಜ್ಯ ಕೊಳೆತು ನಾರುತ್ತಿರುವುದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರ ಎದುರಾಗಿದೆ. ಈ ಹಿಂದೆ ಪರಿಸರದಲ್ಲಿ ಡೆಂಗ್ಯೂ ಜ್ವರ ಹರಡಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿತ್ತು. ಘಟಕದ ಅವ್ಯವಸ್ಥೆಯನ್ನು
ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಉಗ್ರ ರೀತಿಯಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಅದೇ ರೀತಿ ಇದೇ ಜಾಗದಲ್ಲಿ ಮಲ ತ್ಯಾಜ್ಯ ನಿರ್ವಹಣ ಘಟಕ ಆರಂಭಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ.ಬೇರೆ ಬೇರೆ ಕಾರಣ ಮುಂದಿಟ್ಟುಕೊಂಡು ಸುಮಾರು 12.5 ಎಕರೆ ಅರಣ್ಯವನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ನಮ್ಮ ವಿರೋಧವಿದೆ ಎಂದು

ಅವರು ನುಡಿದರು. ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ಗೌಡ ಪಿಜಕಳ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ., ಕಾರ್ಯದರ್ಶಿ ಅಶೋಕ್ ಕುಮಾರ್ ಪಿ, ದಲಿತ ಮುಖಂಡ ರಾಘವ ಕಳಾರ, ಸ್ಥಳೀಯ ಪ್ರಮುಖರಾದ ಚಾಕೋ ಫಿಲಿಪ್, ಬಾಲಕೃಷ್ಣ ನೆಲ್ಲಿಪಡ್ಡು ಅಮರನಾಥ ಶೆಟ್ಟಿ ಕುಂಜತ್ತೋಡಿ, ಶಶಿಕಿರಣ್ ರೈ ಬನ್ನೂರು ಕುಂಜತ್ತೋಡಿ, ಮಹಾವೀರ

ಜೈನ್, ರಘುರಾಮ ನ್ಯಾಕ್ ಕುಕ್ಕೆರೆಬೆಟ್ಟು ದೇವಣ್ಣ ಗೌಡ ಮುಳಿಯ, ಚರಣ್ ಪಾಲಪೆ, ರಮೇಶ್ ಹೇರಂಡ, ಲೋಹಿತ್ ಮುಳಿಯ, ದಾಮೋದರ ಹೆಗ್ಡೆ, ವಸಂತ ರೈ ಇರ್ತಿಮಾರ್, ಪೂರ್ಣಚಂದ್ರ ರೈ, ಚಂದ್ರಶೇಖರ್ ರೈ, ಅರುಣ್ ಕುಮಾರ್ ಪೆರ್ಗಡೆಮಾರ್, ರಮೇಶ್ ಮುಳಿಯ, ಪ್ರವೀಣ್ ತೋರಸ್ ಮುಂತಾದವರು ಪ್ರತಿಭಟನೆಯ ವೇಳೆ ಉಪಸ್ಥಿತರಿದ್ದರು.

ಮಲ ತ್ಯಾಜ್ಯ ಘಟಕಕ್ಕೆ ವಿರೋಧ

ಈಗಾಗಲೇ ರಾಶಿ ಬಿದ್ದಿರುವ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ವಿಷಯ ಪ್ರಸ್ತಾಪಿಸಿದ್ದೆ. ಆದರೆ ಪ್ರಯೋಜನವಾಗಿಲ್ಲ. ತ್ಯಾಜ್ಯ ವಿಲೇವಾರಿ ಘಟಕ ಕೊಳೆತು ನಾರುತ್ತಿರುವುದರ ಮಧ್ಯೆ ಇಲ್ಲಿಯೇ ಮಲ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ತಯಾರಿ ನಡೆಯುತ್ತಿದೆ. ಈ ವಿಚಾರವನ್ನು ವಾರ್ಡ್ ಸದಸ್ಯೆಯಾಗಿರುವ ನನ್ನ ಜೊತೆ ಚರ್ಚಿಸಿಲ್ಲ ಎಣದು ಪಟ್ಟಣ ಪಂಚಾಯತ್ ವಾರ್ಡ್ ಸದಸ್ಯ ಅಕ್ಷತಾ ಬಾಲಕೃಷ್ಣ ಹೇಳಿದರು. ಇಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ನನ್ನ ವಿರೋಧವಿದೆ ಎಂದು ಘೋಷಿಸಿದರು. ಘನತ್ಯಾಜ್ಯ ಘಟಕದ ಅವ್ಯವಸ್ಥೆ ಹಾಗೂ ಕಳಪೆ ಕಾಮಗಾರಿಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವುದು ಹಾಗೂ ಶೀಘ್ರದಲ್ಲೇ ಪಟ್ಟಣ ಪಂಚಾಯತ್ ವಿರುದ್ಧ ಪ್ರತಿಭಟನೆ ನಡೆಸುವುದು ಎಂದು ಪ್ರತಿಭಟನಕಾರರು ಸಭೆ ನಡೆಸಿ ಪ್ರಕಟಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!