ಅಮೆರಿಕಾ ಅಧ್ಯಕ್ಷ Donald Trump ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಮತ್ತಷ್ಟು ಚರ್ಚೆಗೆ ಗ್ರಾಸವಾಗಿವೆ. ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಗಳ ಅಗತ್ಯತೆ ಎದುರಾಗಿದೆ.
ಈ ವದಂತಿಗಳಿಗೆ ಇಂಧನ ನೀಡಿದ ಪ್ರಮುಖ ಕಾರಣವೆಂದರೆ, ಸಂಸದೆ Nancy Mace ಅವರು ಸಾಮಾಜಿಕ ಜಾಲತಾಣದಲ್ಲಿ “ಅಧ್ಯಕ್ಷ ಟ್ರಂಪ್ಗಾಗಿ ಪ್ರಾರ್ಥಿಸಿ” ಎಂದು ಪೋಸ್ಟ್ ಮಾಡಿರುವುದು. ಈ ಪೋಸ್ಟ್ ನಂತರ ಟ್ರಂಪ್ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂಬ ಊಹಾಪೋಹಗಳು ವೇಗವಾಗಿ ಹರಡಲಾರಂಭಿಸಿವೆ.
ಮೇ 2ರಂದು ಟ್ರಂಪ್ ಅವರು ಫ್ಲೋರಿಡಾದಲ್ಲಿ ಖಾಸಗಿ ದಂತವೈದ್ಯರನ್ನು ಭೇಟಿ ಮಾಡಿರುವುದು ಕೂಡ ಸಂಶಯಗಳಿಗೆ ಕಾರಣವಾಯಿತು. ಶ್ವೇತಭವನದಲ್ಲಿಯೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿದ್ದರೂ, ಅವರು ಖಾಸಗಿ ವೈದ್ಯರನ್ನು ಸಂಪರ್ಕಿಸಿರುವುದೇಕೆ ಎಂಬ ಪ್ರಶ್ನೆ ಎದ್ದಿದೆ.
ಇದನ್ನೇ ಕೆಲವರು ತಪ್ಪಾಗಿ ಅರ್ಥೈಸಿ “ತುರ್ತು ಶಸ್ತ್ರಚಿಕಿತ್ಸೆ” ಎಂಬ ಸುದ್ದಿ ಹರಡಿದ್ದಾರೆ. ಇದರ ನಡುವೆಯೇ ಶ್ವೇತಭವನ “ಪ್ರೆಸ್ ಲಿಡ್” ಘೋಷಣೆ ಮಾಡಿದ್ದು (ಅಂದರೆ ಆ ದಿನ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಲ್ಲ ಎಂಬ ಅರ್ಥ) ವದಂತಿಗಳಿಗೆ ಮತ್ತಷ್ಟು ಬಲ ನೀಡಿತು.
ಅಧ್ಯಕ್ಷರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುಳ್ಳು ಸುದ್ದಿಗಳು ಕಾಳ್ಗಿಚ್ಚಿನಂತೆ ಹರಡಿದವು. ಆದರೆ, ಇದುವರೆಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.