ಹೈದರಾಬಾದ್: ತೆಲುಗು ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯೊಂದು ಎದುರಾಗಿದ್ದು, ಉದಯೋನ್ಮುಖ ನಟ ಭರತ್ ಕಾಂತ್ (31) ಅವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೈದರಾಬಾದ್ ಹೊರವಲಯದ ಅದಿಬಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಔಟರ್ ರಿಂಗ್ ರೋಡ್‌ನ ಎಕ್ಸಿಟ್ ನಂ.12 ಸಮೀಪ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಭರತ್ ಕಾಂತ್ ಅವರು ತೆಲುಗು ಚಿತ್ರರಂಗದಲ್ಲಿ ಉದಯೋನ್ಮುಖ ನಟರಾಗಿ ಗುರುತಿಸಿಕೊಂಡಿದ್ದರು. ‘ಗ್ರಾಮಂ’, ‘ಟೆನೆಂಟ್’ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅವರು, ‘ಗೀತಾಂಜಲಿ’ ಹಾಗೂ ‘ಪಾರ್ವತಿ ಪರಮೇಶ್ವರಲು’ ಸೇರಿದಂತೆ ಜನಪ್ರಿಯ ವೆಬ್ ಸರಣಿಗಳಲ್ಲೂ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು.
ಭರತ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ನಟಿ ಆಶು ರೆಡ್ಡಿ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಭರತ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಭಾವುಕ ನಮನ ಸಲ್ಲಿಸಿದ್ದಾರೆ.
“ನನ್ನ ಆತ್ಮೀಯ ಗೆಳೆಯ… ನನ್ನ ಎಮರ್ಜೆನ್ಸಿ ಕಾಂಟ್ಯಾಕ್ಟ್. ನಿನ್ನ ನಗು ಸದಾ ನೆನಪಿನಲ್ಲಿ ಉಳಿಯುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಭರತ್ ಕಾಂತ್ ಅವರ ಅಕಾಲಿಕ ನಿಧನಕ್ಕೆ ತೆಲುಗು ಚಿತ್ರರಂಗದ ಗಣ್ಯರು, ಅಭಿಮಾನಿಗಳು ಮತ್ತು ಸಹನಟರು ಸಂತಾಪ ಸೂಚಿಸಿದ್ದಾರೆ.