ಪುತ್ತೂರು: ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಪುತ್ತೂರು ತಾಲೂಕು ಮಟ್ಟದಲ್ಲಿ ದಾಖಲಾತಿ ಆಂದೋಲನವನ್ನು ಆಯೋಜಿಸಲಾಗುತ್ತಿದ್ದು, ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ 5 ಶೇ. ಹೆಚ್ಚು ದಾಖಲಾತಿಯ ಗುರಿ ಹೊಂದಲಾಗಿದೆ ಎಂದು ಪುತ್ತೂರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ. ತಿಳಿಸಿದರು.
ಅವರು ಗುರುವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು ಹಾಗೂ ಸರಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸರಕಾರಿ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣದ ಜತೆಗೆ ವಿವಿಧ ಸೌಲಭ್ಯಗಳ ಕುರಿತು ಪೋಷಕರ ಮನವೊಲಿಸಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ.
ರಾಜ್ಯದ ಆಯ್ದ 15 ಜಿಲ್ಲೆಗಳಲ್ಲಿ ದ್ವಿಭಾಷಾ ಬೋಧನಾ ಕಲಿಕೆಯನ್ನು ಸರಕಾರ ಜಾರಿ ಮಾಡಿದ್ದು, ದ.ಕ.ಜಿಲ್ಲೆಯ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ಬೋಧನೆ ಅನುಷ್ಠಾನಗೊಳ್ಳಲಿದೆ. ಈ ಬಾರಿ ತಾಲೂಕಿನಲ್ಲಿ ಎಸೆಸೆಲ್ಸಿಯಲ್ಲಿ ಮಕ್ಕಳ ಸಾಧನೆ ಉತ್ತಮವಾಗಿದ್ದು, ೯೮.೫೮ ಶೇ. ಫಲಿತಾಂಶ ಬಂದಿದೆ. ಸರಕಾರಿ ಶಾಲೆಗಳ ಫಲಿತಾಂಶ ೯೬ ಶೇ.ವಾಗಿದ್ದು, 23ರ ಪೈಕಿ 14 ಸರಕಾರಿ ಶಾಲೆಗಳು 100 ಶೇ. ಫಲಿತಾಂಶ ದಾಖಲಿಸಿವೆ.
ತಾಲೂಕಿನ ೨೩ ಸರಕಾರಿ ಶಾಲೆಗಳಲ್ಲಿ ಸರಕಾರದ ವತಿಯಿಂದಲೇ ಎಲ್ ಕೆಜಿ-ಯುಕೆಜಿ ತರಗತಿಗಳನ್ನು ನಡೆಸಲಾಗುತ್ತಿದ್ದು, 2 ಕೆಪಿಎಸ್ ಶಾಲೆಗಳು, 3 ಪಿಎಂಶ್ರೀ ಶಾಲೆಗಳು ಕಾರ್ಯಾಚರಿಸುತ್ತಿವೆ. 210 ಶಿಕ್ಷಕರ ಕೊರತೆ ಇದ್ದು, ಅದನ್ನು ಜೂನ್ ಪ್ರಾರಂಭದಲ್ಲೇ ಅತಿಥಿ ಶಿಕ್ಷಕರ ನೇಮಕದ ಮೂಲಕ ಭರ್ತಿ ಮಾಡಲಾಗುತ್ತದೆ. ಸರಕಾರಿ ಶಾಲೆಗಳ ಕಟ್ಟಡಗಳ ದುರಸ್ತಿಗೆ ಸಂಬಂಧಿಸಿ 90 ಲಕ್ಷ ರೂ.ಗಳ ಕ್ರಿಯಾಯೋಜನೆ ಕಳುಹಿಸಲಾಗಿದ್ದು, 52 ಕೊಠಡಿಗಳ ದುರಸ್ತಿಯ ಬೇಡಿಕೆ ಇದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟೀಪನ್, ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ ಎ.ವಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು.