ಮಂಗಳೂರು: ನಗರದ ಯೆನೆಪೊಯ ಆಸ್ಪತ್ರೆ ಕಟ್ಟಡದ ಎದುರು ಪಾರ್ಕಿಂಗ್ ಸಮಸ್ಯೆ ತೀವ್ರಗೊಂಡಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ತಕ್ಷಣದ ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ.
ಆಸ್ಪತ್ರೆಯ ಎದುರು ವಾಹನ ನಿಲುಗಡೆಗಾಗಿ ಬಳಸಲಾಗುತ್ತಿದ್ದ ಜಾಗದಲ್ಲಿ ಅಂಗಡಿಗಳನ್ನು ನಿರ್ಮಿಸಿ ಬಾಡಿಗೆ ಹಾಗೂ ಮಾರಾಟಕ್ಕೆ ನೀಡಲಾಗಿರುವ ಪರಿಣಾಮ, ಇದೀಗ ವಾಹನಗಳನ್ನು ರಸ್ತೆಯ ಬದಿಯಲ್ಲೇ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇದರ ನಡುವೆ ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗ ಮತ್ತು ರಸ್ತೆ ಬದಿಯಲ್ಲಿ ಹಗ್ಗ ಕಟ್ಟಿ ವಾಹನಗಳನ್ನು ಮತ್ತಷ್ಟು ಮಧ್ಯ ರಸ್ತೆಯತ್ತ ನಿಲ್ಲಿಸುವಂತೆ ಮಾಡಲಾಗುತ್ತಿದೆ ಎನ್ನಲಾಗಿದೆ. ಇದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ಅಪಘಾತ ಸಂಭವಿಸುವ ಭೀತಿಯೂ ಹೆಚ್ಚಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಆಸ್ಪತ್ರೆ, ವ್ಯಾಪಾರ ಮಳಿಗೆಗಳು ಹಾಗೂ ಸಾರ್ವಜನಿಕರ ಓಡಾಟ ಹೆಚ್ಚಿರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ಪೊಲೀಸ್ ಇಲಾಖೆ ಹಾಗೂ ನಗರಾಡಳಿತ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಅನುಕೂಲ ಹಾಗೂ ರಸ್ತೆ ಸುರಕ್ಷತೆ ದೃಷ್ಟಿಯಿಂದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಒದಗಿಸಬೇಕೆಂದು ಮನವಿ ಮಾಡಲಾಗಿದೆ.