“ಕಾಕ್ರೋಚ್‌ ಜನತಾ ಪಾರ್ಟಿ” ಡಿಜಿಟಲ್‌ ಟ್ರೆಂಡ್‌ ಭಾರೀ ವೈರಲ್‌: ರಾಜಕೀಯ ವಲಯದಲ್ಲಿ ಚರ್ಚೆ

ನವದೆಹಲಿ: ಕೇವಲ ಐದು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ “ಕಾಕ್ರೋಚ್‌ ಜನತಾ ಪಾರ್ಟಿ” (ಕೆಜೆಪಿ) ಎಂಬ ಡಿಜಿಟಲ್‌ ಅಭಿಯಾನ ದೇಶದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರದಲ್ಲಿ ದೀರ್ಘಕಾಲದಿಂದ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷಕ್ಕಿಂತಲೂ ಹೆಚ್ಚು ಹಿಂಬಾಲಕರನ್ನು ಈ ಖಾತೆ ಪಡೆದುಕೊಂಡಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಅಭಿಯಾನದ ಹುಟ್ಟಿಗೆ ಕಾರಣವಾಗಿದ್ದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆ ಎನ್ನಲಾಗಿದೆ. ಹಿರಿಯ ವಕೀಲರ ಹುದ್ದೆಗೆ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ, “ಕೆಲ ಯುವಕರು ಸರಿಯಾದ ಉದ್ಯೋಗ ಸಿಗದೆ ಸಾಮಾಜಿಕ ಮಾಧ್ಯಮ ಹೀರೋಗಳಾಗುತ್ತಾರೆ, ಆರ್‌ಟಿಐ ಕಾರ್ಯಕರ್ತರಾಗುತ್ತಾರೆ, ಕಾಕ್ರೋಚ್‌ಗಳಂತೆ ಎಲ್ಲೆಂದರಲ್ಲಿ ಹರಿದಾಡುತ್ತಾರೆ” ಎಂಬ ಅರ್ಥದ ಹೇಳಿಕೆ ನೀಡಿದ್ದರೆಂದು ವರದಿಯಾಗಿದೆ.

ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಹಾರಾಷ್ಟ್ರದ ನಾಗಪುರ ಮೂಲದ 30 ವರ್ಷದ ಅಭಿಜಿತ್‌ ದೀಪ್ಕೆ, ಮೇ 16ರಂದು “ಕಾಕ್ರೋಚ್‌ ಜನತಾ ಪಾರ್ಟಿ” ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆ ಆರಂಭಿಸಿದ್ದಾರೆ.

ಆರಂಭವಾದ ಕೆಲವೇ ದಿನಗಳಲ್ಲಿ ಈ ಖಾತೆ ದೇಶದಾದ್ಯಂತ ವೈರಲ್‌ ಆಗಿ, ವಿಶೇಷವಾಗಿ ಯುವಜನರಿಂದ ಭಾರೀ ಬೆಂಬಲ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣ ಅಂಕಿಅಂಶಗಳ ಪ್ರಕಾರ, ಬಿಜೆಪಿ ಅಧಿಕೃತ ಖಾತೆಗೆ ಸುಮಾರು 8.8 ಮಿಲಿಯನ್‌ ಹಿಂಬಾಲಕರಿದ್ದರೆ, “ಕಾಕ್ರೋಚ್‌ ಜನತಾ ಪಾರ್ಟಿ” ಖಾತೆ 9.6 ಮಿಲಿಯನ್‌ ಹಿಂಬಾಲಕರನ್ನು ದಾಟಿದೆ ಎನ್ನಲಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಸಾಮಾಜಿಕ ಜಾಲತಾಣಗಳು ಇತ್ತೀಚೆಗೆ ಯುವಕರ ಹೋರಾಟದ ವೇದಿಕೆಯಾಗಿ ರೂಪುಗೊಳ್ಳುತ್ತಿದ್ದು, “ಕಾಕ್ರೋಚ್‌ ಜನತಾ ಪಾರ್ಟಿ” ಟ್ರೆಂಡ್‌ ಕೂಡ ಅದೇ ಮಾದರಿಯ ಡಿಜಿಟಲ್‌ ಚಳವಳಿಯ ಸಂಕೇತವಾಗಿದೆ.

ಇನ್ನೊಂದೆಡೆ, ಆಡಳಿತ ವ್ಯವಸ್ಥೆ ಮತ್ತು ಅಧಿಕಾರ ವಲಯಗಳು ಇಂತಹ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸಾಮಾಜಿಕ ಅಸಮಾಧಾನ ಹೆಚ್ಚಾದರೆ ಅದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯ ಮಾತುಗಳೂ ವ್ಯಕ್ತವಾಗುತ್ತಿವೆ.

ಈ ಬೆಳವಣಿಗೆಯಿಂದ ರಾಜಕೀಯ ವಲಯದ ಜೊತೆಗೆ ನ್ಯಾಯಾಂಗದ ಮೇಲೆಯೂ ಸಾರ್ವಜನಿಕ ಚರ್ಚೆ ತೀವ್ರಗೊಂಡಿರುವುದು ಗಮನಾರ್ಹವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!