ಮಂಜೇಶ್ವರ: ಅನಧಿಕೃತ ಮರಳುಗಾರಿಕೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಕುಂಬಳೆ ಪೊಲೀಸರು, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.
ಶಿರಿಯ ಹೊಳೆಯ ಪಾಚಾಣಿ ಪ್ರದೇಶದಿಂದ ಅನಧಿಕೃತವಾಗಿ ಮರಳು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಕುಂಬಳೆ ಪೊಲೀಸರು ಮಫ್ತಿ ವೇಷದಲ್ಲಿ ಕಾರ್ಯಾಚರಣೆ ನಡೆಸಿ, ಶಿರಿಯ ವಳಯಂನಲ್ಲಿ ಟಿಪ್ಪರ್ ಲಾರಿಯನ್ನು ತಡೆದಿದ್ದಾರೆ.
ಈ ವೇಳೆ ವಾಹನ ಚಾಲಕ ಬಂದ್ಯೋಡು ಅಡ್ಕ ನಿವಾಸಿ ಮನೋಜ್ ಕುಮಾರ್ (26) ಎಂಬಾತನನ್ನು ಬಂಧಿಸಲಾಗಿದೆ.
ಮರಳು ಸಾಗಾಟಕ್ಕೆ ಪ್ರೇರೇಪಿಸಿದ ಆರೋಪದ ಮೇರೆಗೆ ವಾಹನ ಮಾಲೀಕ ಸಲೀಂ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಶಪಡಿಸಿಕೊಂಡ ಟಿಪ್ಪರ್ ಲಾರಿಯನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದ್ದು, ಬಂಧಿತ ಚಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಧಿಕೃತ ಮರಳುಗಾರಿಕೆ ವಿರುದ್ಧ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.