ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಭರ್ಜರಿ ಜಯಗಳಿಸಿರುವ ಎ.ಕೆ.ಎಂ. ಅಶ್ರಫ್, ಈ ಸಲ ಕೂಡಾ ಕೇರಳ ವಿಧಾನಸಭೆಯಲ್ಲಿ ಕನ್ನಡ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕಾಸರಗೋಡಿನ ಭಾಷಾ ವೈವಿಧ್ಯತೆಯನ್ನು ಮತ್ತೊಮ್ಮೆ ಎತ್ತಿಹಿಡಿದರು. ಕಳೆದ ಬಾರಿಯಂತೆ ಈ ಬಾರಿಯೂ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ ಅವರು ಎಲ್ಲರ ಗಮನ ಸೆಳೆದರು.
ಮತ್ತೊಂದೆಡೆ, ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಯುಡಿಎಫ್ ಗೆಲುವು ಸಾಧಿಸಿರುವುದರಿಂದ, ಹೊಸ ಸಚಿವ ಸಂಪುಟದಲ್ಲಿ ಕಾಸರಗೋಡು ಜಿಲ್ಲೆಗೆ ಸಚಿವ ಸ್ಥಾನ ಲಭಿಸಲಿದೆ ಎಂಬ ಸ್ಥಳೀಯರ ದೊಡ್ಡ ನಿರೀಕ್ಷೆ ಇತ್ತು.
ಆದರೆ, ಸಂಪುಟ ರಚನೆಯಲ್ಲಿ ಜಿಲ್ಲೆಗೆ ಸ್ಥಾನ ಸಿಗದಿರುವುದು ಜನರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಭಾಷಾ ಹೋರಾಟದ ನಾಡಾದ ಕಾಸರಗೋಡಿಗೆ ರಾಜಕೀಯವಾಗಿ ಮನ್ನಣೆ ಸಿಗದಿರುವುದು ಜಿಲ್ಲೆಯ ಜನತೆಯಲ್ಲಿ ನಿರಾಸೆ ಮೂಡಿಸಿದೆ.