ಮರೆತವರ ಮಡಿಲಲ್ಲಿ ಮರೆಯಾಗುತ್ತಿದೆ ಬಂಗ್ರ ಮಂಜೇಶ್ವರ: ಅಭಿವೃದ್ಧಿಗಾಗಿ ಎಚ್ಚೆತ್ತುಕೊಳ್ಳುವುದೇ ಆಡಳಿತ?

​ಮಂಜೇಶ್ವರ: ಭವ್ಯ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಕೋಮು ಸೌಹಾರ್ದದ ಪ್ರತೀಕವಾಗಿರುವ ‘ಬಂಗ್ರ ಮಂಜೇಶ್ವರ’ ಇಂದು ಅಭಿವೃದ್ಧಿಯ ದೃಷ್ಟಿಯಿಂದ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ದಶಕಗಳಿಂದಲೂ ಇಲ್ಲಿನ ಜನಾಂಗದ ಆಶೋತ್ತರಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯದ ಸುಳಿಯಲ್ಲಿ ಸಿಲುಕಿ ನಲುಗುತ್ತಿವೆ.

​ಐತಿಹಾಸಿಕ ಹಿರಿಮೆ ಮತ್ತು ಸಾಂಸ್ಕೃತಿಕ ಸಂಪತ್ತು
​ಬಂಗ್ರ ಮಂಜೇಶ್ವರವು ಕೇವಲ ಒಂದು ಪ್ರದೇಶವಲ್ಲ, ಇದೊಂದು ಇತಿಹಾಸದ ಭಂಡಾರ. ಇಲ್ಲಿನ 161 ವರ್ಷಗಳ ಹಳೆಯದಾದ ಕಟ್ಟಡವು ಇಂದಿಗೂ ಯಾವುದೇ ಹಾನಿಗಳಿಲ್ಲದೆ ಅಚಲವಾಗಿ ನಿಂತಿದ್ದು, ಅಂದಿನ ವಾಸ್ತುಶಿಲ್ಪದ ವೈಭವವನ್ನು ಸಾರುತ್ತಿದೆ. ಒಂದು ಕಾಲದಲ್ಲಿ ಭವ್ಯವಾಗಿ ನಡೆಯುತ್ತಿದ್ದ ‘ಜೋಡು ಕಂಬಳ’ವು ಈ ಮಣ್ಣಿನ ಸಾಂಸ್ಕೃತಿಕ ಗುರುತಾಗಿತ್ತು. ಆದರೆ, ಕಾಲಕ್ರಮೇಣ ಅದನ್ನು ಇಲ್ಲಿಂದ ಸ್ಥಳಾಂತರಿಸಿದ್ದು ಸ್ಥಳೀಯರಿಗೆ ದೊಡ್ಡ ನೋವನ್ನುಂಟುಮಾಡಿದೆ.

​ಸೌಹಾರ್ದತೆಯ ವಿಚಾರಕ್ಕೆ ಬಂದರೆ, ಕನಿಲ ಕ್ಷೇತ್ರ ಮತ್ತು ಮುಹಿಯುದ್ದೀನ್ ಜುಮಾ ಮಸೀದಿಯು ಇಲ್ಲಿನ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಶ್ರೀಮದ್ ಅನಂತೇಶ್ವರ ದೇವಸ್ಥಾನ, ಕೀರ್ತೇಶ್ವರ ದೇವಸ್ಥಾನ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಅವರ ನಿವಾಸದಂತಹ ಪ್ರಮುಖ ತಾಣಗಳು ಇಲ್ಲಿರುವುದು ಈ ಪ್ರದೇಶದ ಸಾಂಸ್ಕೃತಿಕ ಮಹತ್ವವನ್ನು ಹೆಚ್ಚಿಸಿವೆ.

ಬಂಗ್ರ ಮಂಜೇಶ್ವರದ ಜೈನ ಮಠವು ಪ್ರವಾಸೋದ್ಯಮದ ದೃಷ್ಟಿಯಿಂದ ಒಂದು ಪ್ರಮುಖ ಸಂದರ್ಶನ ಕೇಂದ್ರವಾಗುವ ಎಲ್ಲ ಅರ್ಹತೆಗಳನ್ನು ಹೊಂದಿದೆ. ಆದರೆ, ನಿರ್ವಹಣೆಯ ಕೊರತೆಯಿಂದ ಇಂದು ಆ ಜಾಗವು ಕಾಡು ಪೊದೆಗಳ ಆವಾಸಸ್ಥಾನವಾಗಿ, ಸಮಾಜ ವಿರೋಧಿಗಳ ಅಡ್ಡೆಯಾಗಿ ಬದಲಾಗಿದೆ. ಸುಮಾರು 40 ವರ್ಷಗಳ ಹಿಂದೆ ಎರಡು ಬಾರಿ ನಡೆದ ಉತ್ಸವಗಳೇ ಇಲ್ಲಿನ ಕೊನೆಯ ಸಾಂಸ್ಕೃತಿಕ ಸದ್ದು ಎನ್ನುವುದು ದುರ್ದೈವದ ಸಂಗತಿ.

​ಕಾಡಿಯಾರ್ ದ್ವೀಪ ಎನ್ನುವುದು ನನಸಾಗದ ಕನಸು
​ಪ್ರಕೃತಿಯ ಮಡಿಲಲ್ಲಿರುವ ಕಾಡಿಯಾರ್ ದ್ವೀಪವನ್ನು ಒಂದು ಪ್ರವಾಸಿ ಪಾರ್ಕ್ ಆಗಿ ಅಭಿವೃದ್ಧಿಪಡಿಸಬೇಕೆಂಬುದು ಸ್ಥಳೀಯರ ಹಲವು ವರ್ಷಗಳ ಕನಸು. ಸ್ಥಳೀಯಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ, ಆಡಳಿತ ವರ್ಗದವರು ಈ ಕುರಿತು ಯಾವುದೇ ಮುತುವರ್ಜಿ ವಹಿಸುತ್ತಿಲ್ಲ, ಪರಿಣಾಮವಾಗಿ ಈ ಸುಂದರ ದ್ವೀಪವು ಅಭಿವೃದ್ಧಿಯಿಂದ ದೂರವೇ ಉಳಿದಿದೆ.

​”ನಮ್ಮ ಪೂರ್ವಜರು ಉಳಿಸಿ ಕೊಟ್ಟ ಈ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ನಾವು ಬಯಸುತ್ತೇವೆ, ಆದರೆ ವ್ಯವಸ್ಥೆ ನಮ್ಮನ್ನು ಕಡೆಗಣಿಸುತ್ತಿದೆ” ಎಂಬುದು ಇಲ್ಲಿನ ಯುವಕ-ಯುವತಿಯರ ಅಳಲು. ಬಂಗ್ರ ಮಂಜೇಶ್ವರದ ಅಭಿವೃದ್ಧಿಯು ಕೇವಲ ಭರವಸೆಗಳಲ್ಲೇ ಮುಳುಗಿ ಹೋಗುತ್ತಿದ್ದು, ಇದು ಮರೀಚಿಕೆಯಾಗಿ ಉಳಿದಿರುವುದು ವಿಪರ್ಯಾಸ.

​ಜೈನ ಮಠವಾದ ಐತಿಹಾಸಿಕ ತಾಣವನ್ನು ಸಂರಕ್ಷಿಸಿ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸಬೇಕಾಗಿದೆ.
​ಕಾಡಿಯಾರ್ ದ್ವೀಪದ ಅಭಿವೃದ್ಧಿಗಾಗಿ ಪಾರ್ಕ್ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ.
​ಸಾಂಸ್ಕೃತಿಕ ಪುನರುಜ್ಜೀವನಗೊಳಿಸಲು ಸ್ಥಳಾಂತರಗೊಂಡಿರುವ ಕಂಬಳದಂತಹ ಸಂಸ್ಕೃತಿಗಳನ್ನು ಪುನಃ ಉತ್ತೇಜಿಸುವ ಪ್ರಯತ್ನ ಅಗತ್ಯವಿದೆ.

​ಇತಿಹಾಸ ಮತ್ತು ಪ್ರಸ್ತುತತೆಯ ಸಂಗಮವಾಗಿರುವ ಬಂಗ್ರ ಮಂಜೇಶ್ವರದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಇನ್ನು ಮುಂದಾದರೂ ಕಣ್ಣು ತೆರೆದು ಸ್ಪಂದಿಸುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!