ಮಂಗಳೂರು, ಮೇ 23: ಬಡತನ ನಿರ್ಮೂಲನೆ ಹಾಗೂ ಸಮಾಜದಲ್ಲಿ ಸಮಾನತೆ ಸಾಧಿಸಲು ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಹೇಳಿದರು.
ಮೇರಿಹಿಲ್‌ನ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಲ್ಯಾಂಡ್ ಲಿಂಕ್ಸ್ ಸಂಸ್ಥೆಯಿಂದ ನಿರ್ಮಿಸಲಾದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಶಿಕ್ಷಣ, ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಕೊಡುಗೆ ಶ್ಲಾಘನೀಯವಾಗಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಉದ್ಯೋಗಾವಕಾಶ ಕಲ್ಪಿಸಿರುವುದು ಅವರ ಸಾಮಾಜಿಕ ಬದ್ಧತೆಯ ಪ್ರತೀಕ ಎಂದು ಹೇಳಿದರು.
“ಪಾಲೆಮಾರ್ ಕನ್ವೆನ್ಶನ್ ಸೆಂಟರ್ ಸಮಾಜಮುಖಿ ಚಟುವಟಿಕೆಗಳು, ವಿಚಾರ ಸಂಕಿರಣಗಳು ಹಾಗೂ ಸೌಹಾರ್ದ ಕಾರ್ಯಕ್ರಮಗಳಿಗೆ ಕೇಂದ್ರವಾಗಲಿ” ಎಂದು ಹಾರೈಸಿದರು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, “ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸಾಧನೆ ಸಾಧ್ಯ ಎಂಬುದಕ್ಕೆ ಕೃಷ್ಣ ಪಾಲೆಮಾರ್ ಅವರ ಬದುಕೇ ಉದಾಹರಣೆ” ಎಂದರು.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, “ತುಳುನಾಡಿನ ಸಾಂಸ್ಕೃತಿಕ ಸೌಂದರ್ಯಕ್ಕೆ ಈ ಸಭಾಭವನಗಳು ಹೊಸ ಮೆರುಗು ತಂದಿವೆ. ಯುವಜನತೆಗೆ ಪಾಲೆಮಾರ್ ಅವರ ಜೀವನ ಮಾದರಿಯಾಗಿದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲ್ಯಾಂಡ್ ಲಿಂಕ್ಸ್ ಗ್ರೂಪ್ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಕರಾವಳಿ ಭಾಗದ ಜನರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ವೇಳೆ ವಿದ್ಯಾರ್ಥಿವೇತನ ವಿತರಣೆ, ಸಾಧಕರ ಸನ್ಮಾನ ಹಾಗೂ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಮೇರಿಹಿಲ್‌ನ ಪಾಲೆಮಾರ್ ಕನ್ವೆನ್ಶನ್ ಸೆಂಟರ್, ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್, ಸುರತ್ಕಲ್ ಸಮೀಪದ ಪಾಲೆಮಾರ್ ಫಾರ್ಮ್ಸ್ ಹಾಗೂ ಜೆಪ್ಪಿನಮೊಗರು ಕಡೆಕಾರಿನ ನೇತ್ರಾವತಿ ಸಭಾಭವನಗಳನ್ನು ಏಕಕಾಲದಲ್ಲಿ ಉದ್ಘಾಟಿಸಲಾಯಿತು.